ರೋಗಿಗೆ ಉತ್ತಮ ಸೇವೆ ನೀಡಿದರೆ ಆಸ್ಪತ್ರೆ ಅಭಿವೃದ್ಧಿ: ಧಾರವಾಡ ಎಸ್.ಡಿ.ಎಂ ಯೂನಿವರ್ಸಿಟಿ ರಿಜಿಸ್ಟ್ರಾರ್ ಡಾ.ಚಿದೇಂದ್ರ ಎಂ.ಶೆಟ್ಟರ್ ಹೇಳಿಕೆ

sdm
Published on

ಬೆಳ್ತಂಗಡಿ: ವಿಶಾಲ ಕಟ್ಟಡ ನೋಡಿ ಯಾವ ರೋಗಿಯೂ ಬರುವುದಿಲ್ಲ. ಆಸ್ಪತ್ರೆ ಅಭಿವೃದ್ಧಿಯಾಗಬೇಕಾದರೆ ಅಲ್ಲಿ ತುರ್ತಾಗಿ ದೊರೆಯುವ ಸೇವೆ ಹಾಗೂ ರೋಗಿ ಮತ್ತು ರೋಗಿಯ ಸಹಾಯಕರೊಂದಿಗೆ ನಾವು ನಡೆಸುವ ಸಂವಹನ ಕೂಡ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಎಂದು ಧಾರವಾಡ ಎಸ್.ಡಿ.ಎಂ ಯೂನಿವರ್ಸಿಟಿಯ ರಿಜಿಸ್ಟ್ರಾರ್ ಹಾಗೂ ಮೂಳೆ ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ.ಚಿದೇಂದ್ರ ಎಂ.ಶೆಟ್ಟರ್ ಹೇಳಿದರು.

ಉಜಿರೆ ಎಸ್.ಡಿ.ಎಂ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗೆ ಭೇಟಿ ನೀಡಿ ಮಾತನಾಡಿ, ಹೊರರೋಗಿಹಾಗೂ ಒಳರೋಗಿ ವಿಭಾಗದಲ್ಲಿ ಸಾಕಷ್ಟು ರೋಗಿಗಳಿದ್ದಾರೆ. ಮುಂದಿನ ದಿನಗಳಲ್ಲಿ ಇಲ್ಲಿಯೂ ಖಾಲಿ ಜಾಗ ಕಾಣಲು ಸಾಧ್ಯವಿಲ್ಲ. ಧಾರವಾಡ ಆಸ್ಪತ್ರೆ ಪ್ರಾರಂಭಗೊಂಡಾಗ ಅಲ್ಲಿ ವಿಶಾಲ ಕಟ್ಟಡ, ಹೊರಾಂಗಣ ಎಲ್ಲವೂ ಖಾಲಿ ಖಾಲಿ ಇತ್ತು, ಕೆಲವೇ ವರ್ಷದಲ್ಲಿ ಆಸ್ಪತ್ರೆಯಲ್ಲಿ ಜಾಗದ ಕೊರತೆ ಆಗುವಂತೆ ರೋಗಿಗಳ ಸಂಖ್ಯೆ ಹೆಚ್ಚಾಯಿತು. ವೈದ್ಯರ, ದಾದಿಯರ ಹಾಗೂ ಸಿಬ್ಬಂದಿಯ ದುಡಿಮೆ ಮತ್ತು ತ್ಯಾಗದಿಂದ ಮಾತ್ರ ಇದು ಸಾಧ್ಯ ಎಂದರು.

ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಬಾಬಣ್ಣ ಶೆಟ್ಟಿಗಾರ್ ಮಾತನಾಡಿ, ಉಜಿರೆ ಎಸ್.ಡಿ.ಎಂ. ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ತೊಂದರೆಯಾಗದಂತೆ ಎಲ್ಲ ವೈದ್ಯಕೀಯ ಸೇವೆ ಅಚ್ಚುಕಟ್ಟಾಗಿ ಮತ್ತು ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದರು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಎಂ.ಜನಾರ್ದನ್ ಸ್ವಾಗತಿಸಿದರು. ವೈದ್ಯಕೀಯ ಅಧೀಕ್ಷಕ ಡಾ.ದೇವೇಂದ್ರ ಕುಮಾರ್ ಪಿ, ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಸ್ವರ್ಣಲತಾ, ಕಿವಿ, ಮೂಗು, ಗಂಟಲು ತಜ್ಞ ಡಾ.ರೋಹನ್ ದೀಕ್ಷಿತ್, ಪೇಥಲಾಜಿಸ್ಟ್ ಡಾ.ವಿನಿತಾ ಅಗಸ್ಟಿನ್, ಎಲ್ಲ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net