

ಬೆಂಗಳೂರು: ಭಾರತೀಯ ಕ್ರಿಕೆಟ್ ಇತಿಹಾಸ ಕಂಡ ಯಶಸ್ವಿ ಬೌಲರ್ ಎನಿಸಿರುವ ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ, ನಾಯಕರಾಗಿ ಉತ್ತಮ ನಿರ್ವಹಣೆ ತೋರಿದ್ದರು. ಬಳಿಕ ಭಾರತ ತಂಡದ ಮುಖ್ಯ ಕೋಚ್ ಆಗಿಯೂ ಒಂದು ವರ್ಷ ಕಾಲ ಕಾರ್ಯನಿರ್ವಹಿಸಿದ್ದರು. ಈ ಅವಧಿಯ ಬಗ್ಗೆ ತಮಗೆ ಯಾವುದೇ ವಿಷಾದವಿಲ್ಲ ಎಂದಿರುವ ಕನ್ನಡಿಗ ಅನಿಲ್ ಕುಂಬ್ಳೆ, ಹುದ್ದೆಯಿಂದ ತಾವು ನಿರ್ಗಮಿಸಿದ ರೀತಿಯ ಬಗ್ಗೆ ಮಾತ್ರ ಬೇಸರ ಹೊಂದಿದ್ದಾರೆ.
ಆ ಒಂದು ವರ್ಷದಲ್ಲಿ ನಾವು ಉತ್ತಮ ನಿರ್ವಹಣೆಯನ್ನೇ ತೋರಿದ್ದೆವು. ತಂಡದ ಯಶಸ್ಸಿಗೆ ಕೆಲ ಕೊಡುಗೆಗಳನ್ನು ನೀಡಿದ ಬಗ್ಗೆ ನನಗೆ ತುಂಬ ಖುಷಿ ಇದೆ. ಆ ಬಗ್ಗೆ ಯಾವುದೇ ವಿಷಾದಗಳಿಲ್ಲ. ಆ ಬಳಿಕ ನಾನು ಅಲ್ಲಿಂದ ಮುಂದಕ್ಕೆ ಹೋಗಲು ಖುಷಿಯಿಂದಲೇ ಸಿದ್ಧವಾಗಿದ್ದೆ. ಹುದ್ದೆಯಿಂದ ನನ್ನ ನಿರ್ಗಮನ ಉತ್ತಮವಾಗಿರಬಹುದಾಗಿತ್ತು. ಆದರೆ ಅದನ್ನೂ ಓಕೆ ಎನ್ನುವೆ. ಕೋಚ್ ಆಗಿ ಯಾವಾಗ ಹುದ್ದೆಯಿಂದ ನಿರ್ಗಮಿಸಬೇಕು ಎಂಬ ಬಗ್ಗೆ ತಿಳಿದಿರಬೇಕು ಎಂದು ಅನಿಲ್ ಕುಂಬ್ಳೆ ಅವರು ಜಿಂಬಾಬ್ವೆಯ ಮಾಜಿ ಕ್ರಿಕೆಟಿಗ ಪೊಮ್ಮಿ ಎಂಬಾಗ್ವಾ ಜತೆಗಿನ ಆನ್ಲೈನ್ ಮಾತುಕತೆಯ ವೇಳೆ ಹೇಳಿದ್ದಾರೆ.
ಇದನ್ನೂ ಓದಿ: ಶ್ರೀಲಂಕಾ ಕ್ರಿಕೆಟ್ ಆಟಗಾರ್ತಿ ವೀರಕ್ಕೋಡಿ ವಿದಾಯ
49 ವರ್ಷದ ಅನಿಲ್ ಕುಂಬ್ಳೆ 2017ರ ಚಾಂಪಿಯನ್ಸ್ ಟ್ರೋಫಿ ಫೈನಲ್ ಸೋಲಿನ ಬಳಿಕ ಕೋಚ್ ಹುದ್ದೆಯಿಂದ ಕೆಳಗಿಳಿದಿದ್ದರು. ಪಾಕಿಸ್ತಾನ ವಿರುದ್ಧ ಕಂಡ ಈ ಸೋಲಿಗಿಂತ ನಾಯಕ ವಿರಾಟ್ ಕೊಹ್ಲಿ ಜತೆಗಿನ ಭಿನ್ನಾಭಿಪ್ರಾಯ ಅವರ ನಿರ್ಗಮನಕ್ಕೆ ಪ್ರಮುಖ ಕಾರಣವಾಗಿತ್ತು. ವಿರಾಟ್ ಕೊಹ್ಲಿ ಆಗ ಕುಂಬ್ಳೆ ವಿರುದ್ಧ ಬಹಿರಂಗವಾಗಿ ಬಂಡಾಯವೆದ್ದಿದ್ದರು ಮತ್ತು ಅವರು ಹುದ್ದೆಯಲ್ಲಿ ಮುಂದುವರಿಯುವುದಕ್ಕೆ ಬಲವಾದ ವಿರೋಧ ವ್ಯಕ್ತಪಡಿಸಿದ್ದರು.
ಭಾರತ ತಂಡದ ಕೋಚ್ ಹುದ್ದೆಯನ್ನು ಅಲಂಕರಿಸಿದ್ದ ಖುಷಿ ನನಗಿದೆ. ಭಾರತ ತಂಡದೊಂದಿಗೆ ನಾನು ಕಳೆದ ಆ ಒಂದು ವರ್ಷ ನಿಜಕ್ಕೂ ಅಮೋಘವಾಗಿತ್ತು. ಭಾರತ ತಂಡದ ಪರ ಮೈದಾನದಲ್ಲಿ ಉತ್ತಮ ನಿರ್ವಹಣೆ ತೋರಿದ ಬಳಿಕ ಮತ್ತೊಮ್ಮೆ ತಂಡದ ಡ್ರೆಸ್ಸಿಂಗ್ ರೂಂಗೆ ಮರಳಿದ್ದು ನಿಜಕ್ಕೂ ಶ್ರೇಷ್ಠ ಅನುಭವ ಎಂದು ಭಾರತ ಪರ 132 ಟೆಸ್ಟ್ಗಳಲ್ಲಿ 619 ವಿಕೆಟ್ ಮತ್ತು 271 ಏಕದಿನ ಪಂದ್ಯಗಳಲ್ಲಿ 337 ವಿಕೆಟ್ ಕಬಳಿಸಿರುವ ಕುಂಬ್ಳೆ ಹೇಳಿದ್ದಾರೆ. ಕುಂಬ್ಳೆ ಕೋಚ್ ಆಗಿದ್ದ ಒಂದು ವರ್ಷ ಅವಧಿಯಲ್ಲಿ ಭಾರತ ತಂಡ ಟೆಸ್ಟ್ ಕ್ರಿಕೆಟ್ನಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿತ್ತು. ಭಾರತ ತಂಡ ಆ ಅವಧಿಯಲ್ಲಿ ಆಡಿದ 17 ಟೆಸ್ಟ್ಗಳಲ್ಲಿ ಕೇವಲ 1ರಲ್ಲಿ ಸೋಲು ಕಂಡಿತ್ತು.
ಕುಂಬ್ಳೆ ಅವರು ಈಗ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಮುಖ್ಯ ತರಬೇತುದಾರರಾಗಿದ್ದು, ಮುಂಬರುವ ಐಪಿಎಲ್ ಟೂರ್ನಿಯ ವೇಳೆ ಮತ್ತೆ ಕೋಚ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇವರ ತಂಡಕ್ಕೆ ಕನ್ನಡಿಗ ಕೆಎಲ್ ರಾಹುಲ್ ನಾಯಕರಾಗಿದ್ದು, ಮಯಾಂಕ್ ಅಗರ್ವಾಲ್, ಕರುಣ್ ನಾಯರ್, ಕೆ. ಗೌತಮ್ ಸಹಿತ ಕರ್ನಾಟಕದ ಪ್ರಮುಖ ಆಟಗಾರರೂ ಈ ತಂಡದಲ್ಲಿದ್ದಾರೆ.