ವಿಜಯವಾಣಿ ಸುದ್ದಿಜಾಲ ಕುಂದಾಪುರ
ಕುಂಭಾಶಿಯ ನಾಗಾಚಲ ಶ್ರೀ ಅಯ್ಯಪ್ಪ ಸ್ವಾಮಿ ಮತ್ತು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶೃಂಗೇರಿ ಮಠಕ್ಕೆ ದಾನವಾಗಿ ನೀಡಲಾಗಿದ್ದು, ಅಲ್ಲಿ ಶೃಂಗೇರಿ ಶಂಕರಮಠ ಸ್ಥಾಪಿಸುವ ನಿಮಿತ್ತ ಶೃಂಗೇರಿ ಶ್ರೀಗಳ ಉಪಸ್ಥಿತಿಯಲ್ಲಿ ಶ್ರೀ ಶಾರದಾ ಅಮ್ಮನವರ ಮತ್ತು ಶ್ರೀ ಶಂಕರಾಚಾರ್ಯರ ಪ್ರತಿಷ್ಠಾಪನೆ ಮಹೋತ್ಸವ, ಅಯ್ಯಪ್ಪ ಸ್ವಾಮಿ, ದುರ್ಗಾಪರಮೇಶ್ವರಿ ದೇವರಿಗೆ ಬ್ರಹ್ಮಕಲಶೋತ್ಸವ, ನಾಗಮಂಡಲ ಮಾ.25ರಿಂದ ಆರಂಭಗೊಳ್ಳಲಿದೆ ಎಂದು ಲಕ್ಷ್ಮೀಶ ಅಡಿಗ ಬಡಾಕೆರೆ ತಿಳಿಸಿದರು.
25ರಂದು ವಿಧುಶೇಖರ ಭಾರತಿ ಶ್ರೀಗಳು ದೇವಸ್ಥಾನಕ್ಕೆ ಆಗಮಿಸಲಿದ್ದಾರೆ. ಬಳಿಕ ಶ್ರೀ ಭಾರತೀತೀರ್ಥ ಸಭಾಭವನ ಉದ್ಘಾಟನೆ, ರಾತ್ರಿ ಶ್ರೀಗಳಿಂದ ಶ್ರೀ ಶಾರದಾ ಚಂದ್ರಮೌಳೀಶ್ವರ ಪೂಜೆ ನೆರವೇರಲಿದೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
27ರಂದು ಬೆಳಗ್ಗೆ ಶ್ರೀ ಶಂಕರಾಚಾರ್ಯರ ಮತ್ತು ಶ್ರೀ ಶಾರದಾಮ್ಮನವರ ಬೃಹತ್ ಶೋಭಾಯಾತ್ರೆ, ಶ್ರೀ ಶಂಕರಾಚಾರ್ಯರ ಮತ್ತು ಶ್ರೀ ಶಾರದಾಮ್ಮನವರ ಪ್ರತಿಷ್ಠಾಪನೆ ನಡೆಯಲಿದೆ. ಬಳಿಕ ಶ್ರೀಗಳಿಂದ ಅಯ್ಯಪ್ಪ ದೇವರಿಗೆ ಬ್ರಹ್ಮಕಲಶೋತ್ಸವ, ಶಿಖರಕ್ಕೆ ಕುಂಭಾಭಿಷೇಕ, ಶ್ರೀ ದುರ್ಗಾಪರಮೇಶ್ವರಿ ದೇವರಿಗೆ ಬ್ರಹ್ಮಕಲಶೋತ್ಸವ, ಕೋಟಿ ಮಂಗಳಗೌರಿ ಜಪ ಮತ್ತು ಪಂಚಾಕ್ಷರಿ ಜಪಾಂಗ ಹೋಮ ನೆರವೇರಲಿದೆ. 28ರಂದು ನಾಗಮಂಡಲೋತ್ಸವ ನಡೆಯಲಿದೆ ಎಂದು ಲಕ್ಷ್ಮೀಶ ಅಡಿಗ ಮಾಹಿತಿ ನೀಡಿದರು.
ಮಾ.23ರವರೆಗೆ ಹಗಲು ಭಜನೋತ್ಸವ ನಡೆಯಲಿದ್ದು, ಮಾ.22ರಂದು ಕುಂದೇಶ್ವರ ದೇವಸ್ಥಾನದಿಂದ ಹೊರೆಕಾಣಿಕೆ ಮೆರವಣಿಗೆ ಆಗಮಿಸಲಿದೆ. ಶ್ರೀ ಶಾರದಾ ಪೀಠಂ ಶೃಂಗೇರಿ ಪ್ರಾಂತೀಯ ಧರ್ಮಾಧಿಕಾರಿ ಲೋಕೇಶ್ ಅಡಿಗ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದರು.
ದೇವಸ್ಥಾನ ಸಂಸ್ಥಾಪಕರಾದ ಅಮಿತಾ ಕಲ್ಲುಜ್ಜಿಕರ್, ಅರುಣ್ ಕಲ್ಲುಜ್ಜಿಕರ್, ಡಾ.ಸುನೇರಿ, ಡಾ.ರಾಮ್ ಪ್ರಕಾಶ್ ಕುಂಭಾಶಿ, ನಿವೃತ್ತ ಮುಖ್ಯಶಿಕ್ಷಕ ದಾಮೋದರ ಶಾಶ್ತ್ರಿ, ನಿವೃತ್ತ ಶಿಕ್ಷಕ ಪದ್ಮನಾಭ ಅಡಿಗ ಉಪಸ್ಥಿತರಿದ್ದರು.
21 ಕ್ಷೇತ್ರಗಳ ಸಾಧಕರಿಗೆ ಸನ್ಮಾನ
ಕ್ಷೇತ್ರದಲ್ಲಿ ಮಾ.23ರವರೆಗೆ ವಿವಿಧ ಕಾರ್ಯಕ್ರಮ ನಡೆಯಲಿದ್ದು, ಈ ಸಂದರ್ಭ ಪುರೋಹಿತರು, ಸ್ಥಳೀಯ ಗಣ್ಯರು, ವೈದ್ಯರು, ವಕೀಲ ಹಾಗೂ ಯೋಧರು, ಸಾಹಿತಿ, ನಾಗಪಾತ್ರಿಗಳು, ದೈವನರ್ತಕರು ಹಾಗೂ ಪಾಕಶಾಸ್ತ್ರಜ್ಞರ ಸಹಿತ 21 ಕ್ಷೇತ್ರಗಳಲ್ಲಿ ಸಾಧಕರಾಗಿರುವ 555 ಮಹನೀಯರಿಗೆ ಸನ್ಮಾನ ನೆರವೇರಲಿದೆ ಎಂದು ಲಕ್ಷ್ಮೀಶ ಅಡಿಗ ಮಾಹಿತಿ ನೀಡಿದ್ದಾರೆ.