ಕಾರ್ಕಳ: ಹೃದಯಾಘಾತದಿಂದ ಇತ್ತೀಚೆಗೆ ನಿಧನರಾದ ಅಂತಾರಾಷ್ಟ್ರೀಯ ಕಬ್ಬಡಿ ಆಟಗಾರ ಪ್ರೀತಂ ಶೆಟ್ಟಿ ಸ್ಮರಣಾರ್ಥ ಮುಟ್ಲುಪಾಡಿ ಶ್ರೀ ಅರ್ಧನಾರೀಶ್ವರ ಸ್ಪೋರ್ಟ್ ಕ್ಲಬ್ ವತಿಯಿಂದ ಮುನಿಯಾಲು ವೀರ ಸಾವರ್ಕರ್ ಮೈದಾನದಲ್ಲಿ ಮೇ 3ರಂದು ಕಾರ್ಕಳ ವ್ಯಾಪ್ತಿಯ ಹಾಗೂ ರಾಷ್ಟ್ರಮಟ್ಟದ ಕಬ್ಬಡಿ ಪಂದ್ಯಾಟ ಜರುಗಲಿದೆ ಎಂದು ಶ್ರೀ ಅರ್ಧನಾರೀಶ್ವರ ಸ್ಪೋರ್ಟ್ ಕ್ಲಬ್‌ನ ಗೌರವಾಧ್ಯಕ್ಷ ಗಿರೀಶ್ ಶೆಟ್ಟಿ ತೆಳ್ಳಾರು ಹೇಳಿದರು.
ಕಾರ್ಕಳದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪ್ರೊ.ಕಬ್ಬಡಿ ಆಟಗಾರರನ್ನು ಒಳಗೊಂಡ ಹೊರ ಜಿಲ್ಲೆ ಹಾಗೂ ಹೊರ ರಾಜ್ಯದ ತಂಡಗಳು ಭಾಗವಹಿಸಲಿವೆ. ಕಾರ್ಕಳ ಕ್ಷೇತ್ರ ವ್ಯಾಪ್ತಿಯ ಪಂದ್ಯಾಟದ ಪ್ರಥಮ ಬಹುಮಾನ 25 ಸಾವಿರ ರೂ., ದ್ವಿತೀಯಕ್ಕೆ 15 ಸಾವಿರ ರೂ. ಹಾಗೂ ತೃತೀಯ, ಚತುರ್ಥ ಸ್ಥಾನಕ್ಕೆ ನಗದು ಬಹುಮಾನ ನೀಡಿ ಗೌರವಿಸಲಾಗುವುದು. ರಾಷ್ಟ್ರಮಟ್ಟದ ಪಂದ್ಯಾಟದಲ್ಲಿ ವಿಜೇತರಾದವರಿಗೆ ಪ್ರಥಮ 1ಲಕ್ಷ ರೂ., ದ್ವಿತೀಯ 75 ಸಾವಿರ ರೂ. ಮತ್ತು ತೃತೀಯ ಹಾಗೂ ಚತುರ್ಥ ಬಹುಮಾನವಾಗಿ ತಲಾ 50 ಸಾವಿರ ರೂ. ನಗದು ನೀಡಿ ಗೌರವಿಸಲಾಗುವುದು ಎಂದರು.
ಗೋಷ್ಠಿಯಲ್ಲಿ ಸ್ಪೋರ್ಟ್ಸ್ ಕ್ಲಬ್‌ನ ಅಧ್ಯಕ್ಷ ಸುನೀಲ್ ಹೆಗ್ಡೆ, ಕೋಶಾಧಿಕಾರಿ ಸುದೀಪ್ ಅಜಿಲ, ಸುಹಾಸ್ ಶೆಟ್ಟಿ ಮುಟ್ಲುಪಾಡಿ, ಹರೀಶ್ ಶೆಟ್ಟಿ, ಗೋಪಿನಾಥ್ ಭಟ್ ಮತ್ತಿತರರಿದ್ದರು.
