ಕರೊನಾ ಕಟ್ಟೆಚ್ಚರದಲ್ಲಿ ಕುಂಭ ಮೇಳ : ಹರಿದ್ವಾರದಲ್ಲಿ ಇಂದಿನಿಂದ ಆರಂಭ

kumbh-mela
kumbh-mela
Published on

ಹರಿದ್ವಾರ : ಕರೊನಾ ಆತಂಕದ ನಡುವೆಯೇ ಹನ್ನೆರಡು ವರ್ಷಗಳಿಗೊಮ್ಮೆ ಹರಿದ್ವಾರದಲ್ಲಿ ನಡೆಯುವ ಕುಂಭ ಮೇಳವು ಇಂದಿನಿಂದ ಆರಂಭಗೊಳ್ಳುತ್ತಿದೆ. ಸೋಂಕು ಹರಡುವುದನ್ನು ತಡೆಯುವ ಉದ್ದೇಶದಿಂದ ಮೊಟ್ಟ ಮೊದಲ ಬಾರಿಗೆ ಕುಂಭ ಮೇಳದ ಅವಧಿಯನ್ನು ಒಂದು ತಿಂಗಳಿಗೆ ಮೊಟಕುಗೊಳಿಸಲಾಗಿದೆ. ಜೊತೆಗೆ, ಉತ್ತರಾಖಂಡ ರಾಜ್ಯಕ್ಕೆ ಪ್ರವೇಶಿಸುವುದಕ್ಕೆ ಕರೊನಾ ನೆಗೆಟೀವ್ ಸರ್ಟಿಫಿಕೇಟ್ ಕಡ್ಡಾಯ ಮಾಡಲಾಗಿದೆ.

ಗಂಗಾನದಿಯ ತೀರದಲ್ಲಿ ನಡೆಯುವ ಈ ಮೇಳದಲ್ಲಿ 'ಶಾಹಿ ಸ್ನಾನ್'​ ನಡೆಯುವ ಮುಖ್ಯ ದಿನಗಳು ಏಪ್ರಿಲ್ 12, 14 ಮತ್ತು 27 ಆಗಿವೆ. ಏಪ್ರಿಲ್ 12 ರಂದು ಅತಿ ಹೆಚ್ಚು ಜನರು ಸೇರುವ ನಿರೀಕ್ಷೆ ಇದ್ದು, ಮೇಳವು ಏಪ್ರಿಲ್ 30 ಕ್ಕೆ ಮುಕ್ತಾಯಗೊಳ್ಳಲಿದೆ. ಕಳೆದ ಬಾರಿಯ ಕುಂಭ ಮೇಳವು, 2010 ರ ಜನವರಿ 14 ರಿಂದ ಏಪ್ರಿಲ್ 28 ರವರೆಗೆ ಅದ್ಧೂರಿಯಾಗಿ ಮೂರುವರೆ ತಿಂಗಳ ಕಾಲ ನಡೆದಿತ್ತು.

2021 ರ ಕುಂಭ ಮೇಳವು ಕರೊನಾ ಕಟ್ಟೆಚ್ಚರದೊಂದಿಗೆ ನಡೆಯುತ್ತಿರುವುದರಿಂದ, ಈ ಸಮಯದಲ್ಲಿ ಅನುಸರಿಸಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಉತ್ತರಾಖಂಡ ಸರ್ಕಾರ, ಪರಿಷ್ಕೃತ ಸ್ಟಾಂಡಂರ್ಡ್ ಆಪರೇಟಿಂಗ್ ಪ್ರೊಸೀಜರ್(ಎಸ್​ಒಪಿ)ಗಳನ್ನು ಜಾರಿಗೊಳಿಸಿದೆ. ಏಪ್ರಿಲ್ 1 ರಿಂದ 30 ರವರೆಗೆ ಮೇಳದಲ್ಲಿ ಭಾಗವಹಿಸುವ ಜನರು ಈ ಎಸ್​ಒಪಿಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗಿದೆ.

ಹೊರರಾಜ್ಯಗಳ ಯಾತ್ರಾರ್ಥಿಗಳಿಗೆ, ಪ್ರವಾಸಿಗರಿಗೆ ಆರ್​ಟಿಪಿಸಿಆರ್​ ನೆಗೆಟೀವ್ ಸರ್ಟಿಫಿಕೇಟ್​ನ ಅಗತ್ಯ. ಎಲ್ಲ ಎಂಟ್ರಿ ಪಾಯಿಂಟ್​ಗಳಲ್ಲಿ ದಾಖಲಾತಿಗಳನ್ನು ಪರಿಶೀಲಿಸಲಾಗುವುದು. ಸರ್ಟಿಫಿಕೇಟ್ ಇಲ್ಲದವರಿಗೆ ಪರೀಕ್ಷೆ ನಡೆಸಲು ಪರೀಕ್ಷಾ ಬೂತ್​ಗಳನ್ನೂ ಸ್ಥಾಪಿಸಲಾಗಿದೆ. ಹರಿದ್ವಾರದ ಒಳಗಡೆ, 'ಹರ್ ಕಿ ಪೌದಿ'ಯಲ್ಲಿ ಅಲ್ಲಲ್ಲೇ ಸಾನಿಟೈಸರ್ ಡಿಸ್ಪೆನ್ಸರ್​​ಗಳನ್ನು ಅಳವಡಿಸಲಾಗಿದೆ. ವಿಶೇಷ ಕರೊನಾ ಐಸೊಲೋಷನ್ ಕೇಂದ್ರಗಳನ್ನೂ ಸ್ಥಾಪಿಸಲಾಗಿದೆ. ಎಲ್ಲೆಡೆ ಇರುವಂತೆ ಸಾಮಾಜಿಕ ಅಂತರ ಪಾಲಿಸುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net