

ಬೆಂಗಳೂರು: ಇನ್ಸ್ಪೆಕ್ಟರ್ ನಂದೀಶ್ ಸಾವಿನ ವಿಚಾರವಾಗಿ ಇದೀಗ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ಸರ್ಕಾರವನ್ನು ಟೀಕಿಸಿದ್ದಾರೆ. ಸಚಿವ ಎಂಟಿಬಿ ನಾಗರಾಜ್ ಹೇಳಿಕೆಯ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ. ಆಡಳಿತ ಸರ್ಕಾರಕ್ಕೆ ಮಾನ ಮರ್ಯಾದೆ ಎಂಬುವುದು ಇದ್ದರೆ ಎಂಟಿಬಿ ಹೇಳಿಕೆ ಕುರಿತು ತನಿಖೆ ನಡೆಸಲಿ ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಈ ಪ್ರಕರಣವನ್ನು ತನಿಖೆ ಮಾಡಿಸುತ್ತೇವೆ ಎಂದು ಈಗಾಗಲೇ ಸಿಎಂ ಹೇಳಿದ್ದಾರೆ. ಏನು ತನಿಖೆ ಮಾಡುತ್ತಾರೋ ಗೊತ್ತಿಲ್ಲ. ಸದ್ಯದ ಬಿಜೆಪಿ ಸರ್ಕಾರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಅವರನ್ನು ಬಿಟ್ಟು ಇನ್ಯಾವ ಸಚಿವರೂ ಸರಿಯಿಲ್ಲ. ದುಡ್ಡಿನ ದಂಧೆ ಮಾಡಲು ಬಾಗಿಲು ತೆರೆದು ಕುಳಿತಿದ್ದಾರೆ ಎಂದು ಆರೋಪಿಸಿದ್ದಾರೆ.
ಎಂಟಿಬಿ ನಾಗರಾಜ್ ಹೇಳಿಕೆಯಿಂದ ಪೊಲೀಸ್ ಇಲಾಖೆಯಲ್ಲಿ ದುಡ್ಡಿನ ದಂಧೆ ನಡೆಯುತ್ತಿದೆ ಎಂಬುವುದು ಗೊತ್ತಾಗುತ್ತದೆ. ಸರಿಯಾಗಿ ತನಿಖೆ ಮಾಡಿದರೆ ಸ್ಥಳೀಯ ಶಾಸಕರಿಗೆ, ದೊಡ್ಡ ವ್ಯಕ್ತಿಗಳಿಗೆ ಎಷ್ಟೆಷ್ಟು ಹಣ ಹೋಗಿದೆ ಎಂಬುವುದು ಹೊರಬರುತ್ತದೆ. ಬಿಜೆಪಿ ಸರ್ಕಾರದವರು ಹಣವನ್ನು ಕೈಯಲ್ಲಿ ಬಾಚುತ್ತಿಲ್ಲ. ಬದಲಾಗಿ ಜೆಸಿಬಿಯಲ್ಲಿ ಹಣ ಬಾಚುತ್ತಿದ್ದಾರೆ ಎಂದು ಸರ್ಕಾರದ ವಿರುದ್ದ ಕುಮಾರಸ್ವಾಮಿ ಕಿಡಿಕಾರಿದ್ದಾರೆ.