

ಶಿವಮೊಗ್ಗ: ಇಂದು ರಾಜ್ಯದ 14 ಕ್ಷೇತ್ರಗಳಲ್ಲಿ ಲೋಕಸಭಾ ಚುನಾವಣೆಯ ಎರಡನೇ ಹಂತದ ಮತದಾನ ಬಿರುಸಿನಿಂದ ಸಾಗುತ್ತಿದ್ದು, ತಮ್ಮ ತಮ್ಮ ಕ್ಷೇತ್ರದ ಅಭ್ಯರ್ಥಿಗೆ ಮತ ಚಲಾಯಿಸುವ ಮೂಲಕ ಅಧಿಕಾರ ಕೊಡುವ ಬಗ್ಗೆ ಮತದಾರರು ದಿಟ್ಟ ನಿರ್ಧಾರ ಕೈಗೊಂಡಿದ್ದಾರೆ. ಇನ್ನು ಈ ಬೆನ್ನಲ್ಲೇ ಶಿವಮೊಗ್ಗ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿಯಾದ ಗೀತಾ ಶಿವರಾಜ್ಕುಮಾರ್ ಕುರಿತು ಕುಮಾರ್ ಬಂಗಾರಪ್ಪ ವ್ಯಂಗ್ಯವಾಡಿದ್ದಾರೆ.
ಕಳೆದ ಹಲವಾರು ದಿನಗಳಿಂದ ಪತ್ನಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಯೂ ಆಗಿರುವ ಗೀತಾ ಅವರ ಪರ ಬಿರುಸಿನ ಪ್ರಚಾರ ನಡೆಸುತ್ತಿರುವ ಕನ್ನಡ ಚಿತ್ರರಂಗದ ಹಿರಿಯ ನಟ ಶಿವರಾಜ್ ಕುಮಾರ್, ಮೇ.7 ಎಲೆಕ್ಷನ್ ಮುಗಿಯಲಿ, ಆಮೇಲೆ ದಿನದ 24 ಗಂಟೆ ಕೂಡ ಶಿವಮೊಗ್ಗಕ್ಕೆ ಬಂದು ಹಾಡಿ, ಕುಣಿಯುತ್ತೀನಿ ಎಂದು ಉತ್ಸಾಹದಿಂದ ಹೇಳಿದ್ದರು. ಸದ್ಯ ಈ ಹೇಳಿಕೆಯನ್ನು ಲೇವಡಿ ಮಾಡಿರುವ ಕುಮಾರ್ ಬಂಗಾರಪ್ಪ, "ನೀವು ಅಷ್ಟಕ್ಕೂ ಡ್ಯಾನ್ಸ್ ಮಾಡಲೇಬೇಕು ಎಂದು ನಿರ್ಧರಿಸಿದ್ರೆ, ವರ್ಷಕ್ಕೊಮ್ಮೆ ನಡೆಯುವ ಚಂದ್ರಗುತ್ತಿ ಜಾತ್ರೆಯಲ್ಲಿ ಬಂದು ಕುಣಿಯಿರಿ, ಅದೇ ಸಾಕು" ಎಂದಿದ್ದಾರೆ.
"ನೀವು ಏನೇ ಮಾಡಿದ್ರೂ 100ಕ್ಕೆ 100 ಸೋಲೋದು ಖಂಡಿತ. ಶಿವಮೊಗ್ಗದಲ್ಲಿ ಗೀತಾ ಸೋಲುವುದು ಪಕ್ಕಾ" ಎಂದು ಗೀತಾ ಶಿವರಾಜ್ ಕುಮಾರ್ ಸೋಲಿನ ಬಗ್ಗೆ ಭವಿಷ್ಯ ನುಡಿದಿದ್ದಾರೆ.