ಸಾರಿಗೆ ನೌಕರರ ಹೋರಾಟಕ್ಕೆ ಬೆಂಬಲ ಕೊಡ್ತೀನಿ, ಆದ್ರೆ ನಮ್ಮದೊಂದು ಷರತ್ತು ಇದೆ: ಎಚ್​.ಡಿ.ರೇವಣ್ಣ

HD Revanna
Published on

ಹಾಸನ: ಸಾರಿಗೆ ನೌಕರರ ಮುಷ್ಕರ ಕುರಿತು ಮಾತನಾಡಿದ ಮಾಜಿ ಸಚಿವ ಎಚ್​.ಡಿ.ರೇವಣ್ಣ, ಕೆಲವರಿಗೆ ಕಡಿವಾಣ ಹಾಕಬೇಕಾಗುತ್ತೆ ಎಂದು ಕೋಡಿಹಳ್ಳಿ ಚಂದ್ರಶೇಖರ್ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.

ಯುಗಾದಿ ಹಬ್ಬ ಕಳೆದು ಪ್ರತಿಭಟನೆ ಮಾಡಬಹುದಿತ್ತು. ಸಂಸ್ಥೆಗೆ ಒಂದಿಷ್ಟು ಲಾಭ ಬರುತ್ತಿತ್ತು. ಮೂರು ತಿಂಗಳಿಗೇ ಪ್ರತಿಭಟನೆ ಮಾಡುವುದು ತಪ್ಪು ಎಂದ ರೇವಣ್ಣ, ಸಾರಿಗೆ ನೌಕರರೇ ಮೊದಲು ಪ್ರತಿಭಟನೆ ನಿಲ್ಲಿಸಿ. ಎರಡನೇ ತಾರೀಖು ನೌಕರರ ಸಮಸ್ಯೆ ಸರಿ ಪಡಿಸದಿದ್ದರೆ ನಾವು ನಿಮ್ಮೊಂದಿಗೆ ಕೈ ಜೋಡಿಸುತ್ತೇವೆ ಎಂದರು. ಇದನ್ನೂ ಓದಿರಿ ಬಸ್​ ನಿಲ್ದಾಣದಲ್ಲೇ ವಿಷ ಕುಡಿದ ಕೆಎಸ್​ಆರ್​ಟಿಸಿ ನೌಕರ! ನರಳಾಡುತ್ತಿದ್ದರೂ ಸಾವಿಗೆ ಕಾರಣ ಬಿಚ್ಚಿಟ್ಟ

ವಿರೋಧ ಪಕ್ಷಗಳು ಮತ್ತು ಕಾರ್ಮಿಕರನ್ನು ಕೂರಿಸಿಕೊಂಡು ಸಿಎಂ ಮಾತನಾಡಲಿ. ನೌಕರರಿಗೆ ಹಿಂದೆಯಿಂದ ಹೇಳಿಕೊಟ್ಟು ಪ್ರತಿಭಟನೆ ಮಾಡಿಸುತ್ತಿರುವರನ್ನು ಕೈಬಿಡಿ. ಕೆಲ ಶಕ್ತಿಗಳು ನೌಕರರ ಹಿಂದೆ ಕೆಲಸ ಮಾಡುತ್ತಿವೆ ಎಂದು ರೇವಣ್ಣ ಗಂಭೀರ ಆರೋಪ ಮಾಡಿದರು.

ನಿಯತ್ತಾಗಿ ಪ್ರತಿಭಟನೆ ಮಾಡಿದ್ರೆ ನಾವು ನಿಮಗೆ ಸಹಕಾರ ಕೊಡುತ್ತೇವೆ. ಆದರೆ ಯಾರ್ಯಾರದ್ದೋ ಮಾತು ಕೇಳಬೇಡಿ. ಕೆಲವರು ಕೆಎಸ್ಆರ್​ಟಿಸಿ ಸಂಸ್ಥೆಗೆ ಧಕ್ಕೆ ತರುತ್ತಿದ್ದಾರೆ. ಕೆಎಸ್​ಆರ್​ಟಿಸಿ ನೌಕರರು ವರ್ಷಕ್ಕೆ ಒಂದು ಹಬ್ಬವನ್ನಾದರೂ ಮಾಡಬಾರದಾ? ಎಂದರು.

ಕೆಎಸ್​ಆರ್​ಟಿಸಿ ನೌಕರರು ಒಂದು ವಾರದಿಂದ ಪ್ರತಿಭಟನೆ ಮಾಡುತ್ತಿದ್ದಾರೆ. ಒಂದು ಸಂಸ್ಥೆ ಕಟ್ಟುವುದು ಸುಲಭವಲ್ಲ, ಅವರದ್ದೇ ಸಂಸ್ಥೆ ಅದು. ಇದರಲ್ಲಿ ರಾಜಕೀಯ ಮಾಡಬಾರದು. ನೌಕರರ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಈಗ ಬರುವ ಸಂಬಳದಲ್ಲಿ ಮಕ್ಕಳನ್ನು ಓದಿಸಲು ಆಗುತ್ತಾ? ಸರ್ಕಾರ ಹಾಗೂ ನೌಕರರು ಪ್ರತಿಷ್ಠೆ ಬಿಡಬೇಕು. ನಿನ್ನೆಯಿಂದ ಇಲ್ಲಿಯವರೆಗೂ ಸುಮಾರು 300 ಜನರನ್ನ ವರ್ಗಾವಣೆ ಮಾಡಿದ್ದಾರೆ. ಇದು ಸರಿಯಲ್ಲ. ಎಲ್ಲರಿಗೂ ಸಂಬಳ ಕೊಡಿ ಎಂದು ರೇವಣ್ಣ ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net