'ಎಮರ್ಜೆನ್ಸಿ' ಫ್ಲಾಪ್​ ಆಗಲಿದೆ ಎಂದು ಕಂಗನಾಗೆ ಟಾಂಗ್​ ಕೊಟ್ಟ ಕೆಆರ್​ಕೆ

KRK - Kangana Ranaut - Final
Published on

ಮುಂಬೈ: ಕಳೆದ ವಾರವಷ್ಟೇ ಕಂಗನಾ ರಣಾವತ್​​ 1975ರ ಎಮರ್ಜೆನ್ಸಿ ಕುರಿತಾಗಿ 'ಎಮರ್ಜೆನ್ಸಿ' ಎಂಬ ಚಿತ್ರವನ್ನು ನಿರ್ದೇಶಿಸುವುದಾಗಿ ಘೋಷಿಸಿದ್ದರು. ಬರೀ ನಿರ್ದೇಶನವಷ್ಟೇ ಅಲ್ಲ, ಆ ಚಿತ್ರದಲ್ಲಿ ಇಂದಿರಾ ಗಾಂಧಿ ಅವರ ಪಾತ್ರವನ್ನೂ ಕಂಗನಾ ಮಾಡುತ್ತಿದ್ದು, ಪಾತ್ರಕ್ಕಾಗಿ ಅವರು ಮೇಕಪ್​ ಟೆಸ್ಟ್​ ಮಾಡಿಸಿಕೊಳ್ಳುತ್ತಿರುವುದು ಸಹ ಸುದ್ದಿಯಾಗಿತ್ತು.

ಈಗ್ಯಾಕೆ ಈ ವಿಷಯವೆಂದರೆ, 'ಎಮರ್ಜೆನ್ಸಿ' ಫ್ಲಾಪ್​ ಆಗಲಿದೆ ಎಂದು ಬಾಲಿವುಡ್​ನ ಸ್ವಯಂಘೋಷಿತ ನಂಬರ್​ ಒನ್​ ವಿಮರ್ಶಕ ಕೆಆರ್​ಕೆ ಭವಿಷ್ಯ ನುಡಿದಿದ್ದಾರೆ. ಈ ಕುರಿತು ಟ್ವೀಟ್​ ಮಾಡಿರುವ ಅವರು, 'ಈ ಹಿಂದೆ ನಿರ್ದೇಶಕ ಮಧುರ್​ ಭಂಡಾರ್ಕರ್​, ಇಂದಿರಾ ಗಾಂಧಿ ಮತ್ತು ಎಮರ್ಜೆನ್ಸಿಯ ಕುರಿತು 'ಇಂದು ಸರ್ಕಾರ್​' ಎಂಬ ಚಿತ್ರ ನಿರ್ದೇಶಿಸಿದ್ದರು. ಆ ಚಿತ್ರವನ್ನು ಯಾರೂ ನೋಡಲಿಲ್ಲ. ಈಗ ಅಕ್ಕ, ಅದೇ ಕಥೆ ಇಟ್ಟುಕೊಂಡು ಚಿತ್ರ ಮಾಡುವುದಕ್ಕೆ ಹೊರಟಿದ್ದಾರೆ. ಇದರ ಅರ್ಥ ಸ್ಪಷ್ಟ. ಇದುವರೆಗೂ 11 ಫ್ಲಾಪ್​ ಚಿತ್ರಗಳನ್ನು ಕೊಟ್ಟಿರುವ ಕಂಗನಾ, 'ಎಮರ್ಜೆನ್ಸಿ' ಮೂಲಕ 12ನೇ ಫ್ಲಾಪ್​ ಚಿತ್ರ ನೀಡಲಿದ್ದಾರೆ' ಎಂದು ಕೆಆರ್​ಕೆ ಹೇಳಿದ್ದಾರೆ. ಈ ವಿಷಯವಾಗಿ ಕಂಗನಾ ಇನ್ನೂ ಯಾವುದೇ ಪ್ರತಿಕ್ರಿಯೆಯನ್ನೂ ನೀಡಿದೆ ಸುಮ್ಮನಿದ್ದು, ಕಂಗನಾ ಏನು ಹೇಳಬಹುದು ಎಂಬ ಕುತೂಹಲ ಎಲ್ಲರಿಗೂ ಇದೆ.

ಕೆಆರ್​ಕೆ ಮಾತಿಗೆ ಕಂಗನಾ ಹೇಗೆ ಪ್ರತಿಕ್ರಿಯಿಸುತ್ತಾರೋ ಗೊತ್ತಿಲ್ಲ. ಆದರೆ, ಚಿತ್ರವನ್ನು ನಿರ್ದೇಶಿಸುವುದಕ್ಕೆ ಥ್ರಿಲ್​ ಆಗಿದ್ದಾರೆ. ಅಷ್ಟೇ ಅಲ್ಲ, ಈ ಚಿತ್ರವನ್ನು ಇನ್ನೊಂದು ಲೆವೆಲ್​ಗೆ ತೆಗೆದುಕೊಂಡು ಹೋಗುವುದಾಗಿ ಅವರು ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಸಹ ಹಾಕಿದ್ದರು. 'ನಿರ್ದೇಶನ ಮಾಡುತ್ತಿರುವುದಕ್ಕೆ ಸಂತೋಷವಾಗಿದೆ. ಕಳೆದ ಒಂದು ವರ್ಷದಿಂದ ಈ ಸ್ಕ್ರಿಪ್ಟ್​ನಲ್ಲಿ ತೊಡಗಿಸಿಕೊಂಡಿದ್ದು, ನನಗಿಂತ ಈ ಚಿತ್ರವನ್ನು ಚೆನ್ನಾಗಿ ಮಾಡುವುದಕ್ಕೆ ಯಾರಿಂದ ಸಾಧ್ಯ? ಇದರಿಂದ ಬೇರೆ ಚಿತ್ರಗಳನ್ನು ಕೈಬಿಡಬೇಕಾದರೂ, ಆ ತ್ಯಾಗ ಮಾಡುವುದಕ್ಕೆ ನಾನು ಸಿದ್ಧ. ಈ ಚಿತ್ರದಿಂದ ಇನ್ನೊಂದು ಲೆವೆಲ್​ಗೆ ಹೋಗುತ್ತೇನೆ ಎಂಬ ನಂಬಿಕೆ ಖಂಡಿತಾ ಇದೆ' ಎಂದು ಕಂಗನಾ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net