

ಮುಂಬೈ: ಬಾಲಿವುಡ್ನ ಜನಪ್ರಿಯ ನಟ ಇರ್ಫಾನ್ ಖಾನ್ ಅವರ ಮಗ ಬಾಬಿಲ್ ಖಾನ್, ವೆಸ್ಟ್ಮಿನಿಸ್ಟರ್ ಯೂನಿವರ್ಸಿಟಿಯಲ್ಲಿ ಗ್ರಾಜುಯೇಷನ್ ಮಾಡುತ್ತಲೇ, ಚಿತ್ರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಎರಡು ಚಿತ್ರಗಳಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿದ್ದರು. ಇದೀಗ ಅವರು ಅಧಿಕೃತವಾಗಿ ಓದು ಬಿಟ್ಟು, ಪೂರ್ತಿಯಾಗಿ ಚಿತ್ರರಂಗದಲ್ಲಿ ತೊಡಗಿಸಿಕೊಳ್ಳುವುದಕ್ಕೆ ತೀರ್ಮಾನಿಸಿದ್ದಾರೆ.
ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಅವರು, 'ಸ್ನೇಹಿತರೆ, ನಿಮ್ಮನ್ನೆಲ್ಲ ಮಿಸ್ ಮಾಡಿಕೊಳ್ಳುತ್ತಿದ್ದೇನೆ. ಓದು ಬಿಟ್ಟು, ಅಭಿನಯದಲ್ಲಿ ಪೂರ್ಣಪ್ರಮಾಣದಲ್ಲಿ ತೊಡಿಗಿಸಿಕೊಳ್ಳುತ್ತಿದ್ದೇನೆ. ಗುಡ್ಬೈ, ಯೂನಿವರ್ಸಿಟಿ ಆಫ್ ವೆಸ್ಟ್ಮಿನಿಸ್ಟರ್' ಎಂದು ಬರೆದುಕೊಂಡಿದ್ದಾರೆ.
ಬಾಬಿಲ್, ಈಗಾಗಲೇ 'ಖಲಾ' ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅನೂಷ್ಕಾ ಶರ್ಮಾ ನಿರ್ಮಾಣದ 'ಖಲಾ' ಚಿತ್ರದ ಚಿತ್ರೀಕರಣ, ಈಗಾಗಲೇ ಪ್ರಾರಂಭವಾಗಿದ್ದು ಒಂದು ಹಂತದ ಚಿತ್ರೀಕರಣ ಸಹ ಮುಗಿದಿದೆ.
ಈಗ ಅದೇ ಬಾಬಿಲ್ ಇನ್ನೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಹಿಂದೆ ಇರ್ಫಾನ್ ಖಾನ್ ಅಭಿನಯದ 'ಪೀಕು' ಚಿತ್ರವನ್ನು ನಿರ್ದೇಶಿಸಿದ್ದ ಶೂಜಿತ್ ಸರ್ಕಾರ್, ಈಗ ಇರ್ಫಾನ್ ಅವರ ಮಗ ಬಾಬಿಲ್ ಅವರನ್ನು ಹೊಸ ಚಿತ್ರದಲ್ಲಿ ನಿರ್ದೇಶನ ಮಾಡುತ್ತಿದ್ದಾರೆ.