ಯಶಸ್ವಿಯಾಗಿ 2ನೇ ದಿನಕ್ಕೆ ಕಾಲಿಟ್ಟ ರಾಜ್ಯ ಮಟ್ಟದ ಕೃಷಿ ಮೇಳ: ವಿಜಯವಾಣಿ, ದಿಗ್ವಿಜಯ ನ್ಯೂಸ್​ ಆಯೋಜನೆ

Krishimela
Published on

ಮೈಸೂರು: 'ಸುಸ್ಥಿರ ಅಭಿವೃದ್ಧಿ ನಮ್ಮ ಗುರಿ' ಪರಿಕಲ್ಪನೆಯಡಿ ವಿಜಯವಾಣಿ ಮತ್ತು ದಿಗ್ವಿಜಯ ಸುದ್ದಿವಾಹಿನಿ ವತಿಯಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿರುವ ಮೂರು ದಿನಗಳ ಕೃಷಿ ಮೇಳ ಯಶಸ್ವಿಯಾಗಿ ಎರಡನೇ ದಿನಕ್ಕೆ ಕಾಲಿಟ್ಟಿದೆ.

ರಾಜ್ಯ ಮಟ್ಟದ ಕೃಷಿ ಮೇಳ ಇದಾಗಿದ್ದು, ನಿನ್ನೆ ಮೊದಲ ದಿನದಂದು ಸಹಸ್ರಾರು ಸಂಖ್ಯೆಯಲ್ಲಿ ಜನರು ಭೇಟಿ ನೀಡಿ ರೈತರಿಂದ ಉಪಯುಕ್ತ ಮಾಹಿತಿ ಸಂಗ್ರಹಿಸಿದ್ದರು. ಇಂದು ಬೆಳಗ್ಗೆ 10.30ಕ್ಕೆ ‘ಕೃಷಿ ವಿಚಾರಗೋಷ್ಠಿ’ ನಡೆಯಲಿದ್ದು, ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಉದ್ಘಾಟನೆ ಮಾಡಲಿದ್ದಾರೆ.

ಕೆಎಸ್‌ಡಿಎಲ್ ಅಧ್ಯಕ್ಷರೂ ಆದ ಶಾಸಕ ಮಾಡಾಳು ವಿರೂಪಾಕ್ಷಪ್ಪ, ಎಂಎಸ್‌ಐಎಲ್ ಅಧ್ಯಕ್ಷ ಹರತಾಳು ಹಾಲಪ್ಪ, ಮುಕ್ತ ವಿವಿ ಕುಲಸಚಿವ ಡಾ.ಕೆ.ಎಲ್.ಎನ್.ಮೂರ್ತಿ ಅವರು ಕೃಷಿ ವಿಚಾರಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಇದಾದ ಬಳಿಕ ಬೆಳಗ್ಗೆ 11.30ಕ್ಕೆ ‘ತೋಟಗಾರಿಕೆ; ಹೊಸ ಸಾಧ್ಯತೆ’ ಕುರಿತು 2ನೇ ಗೋಷ್ಠಿ ನಡೆಯಲಿದೆ. ಮಧ್ಯಾಹ್ನ 2ಕ್ಕೆ ‘ಕೃಷಿ ಮೌಲ್ಯವರ್ಧನೆ ಮತ್ತು ಮಾರುಕಟ್ಟೆ’ ಕುರಿತು 3ನೇ ಗೋಷ್ಠಿ ನಡೆಯಲಿದೆ. ಸಂಜೆ 4.30ಕ್ಕೆ ಕರೋಕೆ ಗಾಯನ, ವೀರಗಾಸೆ ನೃತ್ಯ ಪ್ರದರ್ಶನ, ಜಾನಪದ ಗೀತೆಗಳ ಗಾಯನ, ಸುಗಮ ಸಂಗೀತ, ಸುಗ್ಗಿ ಕುಣಿತ, ಶಕ್ತಿಧಾಮ ಮಕ್ಕಳಿಂದ ‘ಕಿಂದರಿ ಜೋಗಿ’ ನಾಟಕ ಪ್ರದರ್ಶನವಾಗಲಿದೆ.

ಕೃಷಿ ಮೇಳದಲ್ಲಿ ದೇಶಿ ಕ್ರೀಡೆ

ಬೆಳಗ್ಗೆ 10 ಗಂಟೆಗೆ ಪುರುಷರಿಗೆ ಬಾಳೆಹಣ್ಣು ತಿನ್ನುವ ಸ್ಪರ್ಧೆ, ಒಂಟಿಕಾಲಿನ ಓಟ, ಗೊಬ್ಬರಮೂಟೆ ಹೊತ್ತು ಓಡುವ ಸ್ಪರ್ಧೆ ಹಾಗೂ ಬೆಳಗ್ಗೆ 11.30ಕ್ಕೆ ಮಹಿಳೆಯರಿಗೆ ಬಾಳೆಹಣ್ಣು ತಿನ್ನುವ ಸ್ಪರ್ಧೆ, ಲೆಮನ್ ಆ್ಯಂಡ್ ಸ್ಪೂನ್ ಸ್ಪರ್ಧೆ, ರಂಗೋಲಿ ಸ್ಪರ್ಧೆ ಇರಲಿದೆ. ಬೆಳಗ್ಗೆ 9.30ಕ್ಕೆ ಮಕ್ಕಳಿಗೆ ಸ್ಕಿಪ್ಪಿಂಗ್ ಸ್ಪರ್ಧೆ ಆಯೋಜನೆ ಮಾಡಲಾಗಿದೆ.

ಕೃಷಿ ಮೇಳದಲ್ಲಿ ಮಣ್ಣುರಹಿತ ಕೃಷಿ, ಕೃಷಿಯಲ್ಲಿ ಡ್ರೋನ್‌ ಬಳಕೆ, ಆಟೋಮೇಟೆಡ್‌ ಕೃಷಿ ಯಂತ್ರೋಪಕರಣ, ಕೃಷಿ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ಇರಲಿದೆ. ಸಿರಿಧಾನ್ಯ ಹಾಗೂ ಅವುಗಳ ಮಹತ್ವ, ಔಷಧೀಯ ಮತ್ತು ಸುಗಂಧ ದ್ರವ್ಯ ಸಸ್ಯ, ಜಲಾನಯನ ನಿರ್ವಹಣೆ, ಸಾವಯವ ಕೃಷಿ ಪದ್ಧತಿ, ಸಮಗ್ರ ಪೋಷಕಾಂಶಗಳು, ರೋಗ ನಿರ್ವಹಣೆ, ಹನಿ ಹಾಗೂ ತುಂತುರು ನೀರಾವರಿ ಪದ್ಧತಿ, ಮಳೆ ಮತ್ತು ಚಾವಣಿ ನೀರು ಸಂಗ್ರಹ ಯೋಜನೆಯ ಬಗ್ಗೆ ಮೇಳದಲ್ಲಿ ತಜ್ಞರಿಂದ ರೈತರಿಗೆ ಅಮೂಲ್ಯ ಸಲಹೆ ಸಿಗಲಿವೆ.

ಸುಧಾರಿತ ಕೃಷಿ ಯಂತ್ರೋಪಕರಣಗಳ ಪ್ರದರ್ಶನ, ಕೊಯ್ಲೋತ್ತರ ತಾಂತ್ರಿಕತೆ, ಕೃಷಿ ಉತ್ಪನ್ನ ಸಂಸ್ಕರಣೆ, ಮೌಲ್ಯವರ್ಧನೆ, ಬಿತ್ತನೆ ಬೀಜ ಪರೀಕ್ಷೆ ಹಾಗೂ ಶೇಖರಣೆ, ಮೀನು ಸಾಕಾಣಿಕೆ, ಹವಾಮಾನ ಚತುರ ಕೃಷಿ ಸೇರಿ ಇತರ ಮಾಹಿತಿಗಳು ಕೃಷಿ ಮೇಳದಲ್ಲಿ ದೊರೆಯಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net