

ವಿಜಯವಾಣಿ ಸುದ್ದಿಜಾಲ ಬಂಟ್ವಾಳ
ಸುಮಾರು ಅರ್ಧ ಎಕರೆ ವಿಸ್ತೀರ್ಣದ ಗದ್ದೆ. ಗದ್ದೆಯ ತುಂಬೆಲ್ಲಾ ಹಚ್ಚಹಸುರಿನಿಂದ ನಳನಳಿಸುತ್ತಿರುವ ಭತ್ತದ ಪೈರು. ಕಣ್ಣಾಯಿಸಿ ನೋಡುತ್ತಿದ್ದರೆ ಮನಸ್ಸಿಗೇನೋ ಸಂಭ್ರಮ. ಕೃಷಿಕರನ್ನು ಮೀರಿಸುವಂತೆ ಈ ಪರಿ ಸಾಗುವಳಿ ಮಾಡಿದವರು ಹಾಸ್ಟೆಲ್ ವಿದ್ಯಾರ್ಥಿನಿಯರು.
ಒಂದೂವರೆ ತಿಂಗಳ ಹಿಂದೆ ವಾಮದಪದವು ಹಾಗೂ ಚೆನ್ನೈತ್ತೋಡಿಯಲ್ಲಿರುವ ಶ್ರೀ ದೇವರಾಜ ಅರಸು ಮೆಟ್ರಿಕ್ ನಂತರದ ಹಾಸ್ಟೆಲ್ ವಿದ್ಯಾರ್ಥಿನಿಯರು ಕೃಷಿ ಕಲಿ-ನಲಿ ಕಾರ್ಯಕ್ರಮದ ಮೂಲಕ ಬೆಳೆಸಿದ ಭತ್ತದ ಕೃಷಿ ತೆನೆ ಬಿಡಲಾರಂಭಿಸಿದೆ. ದಿನವಿಡೀ ಗದ್ದೆಯಲ್ಲಿ ಮೈಗೆಲ್ಲಾ ಕೆಸರು ಅಂಟಿಸಿಕೊಂಡು ನೇಜಿ ಕಿತ್ತು, ನಾಟಿ ಮಾಡಿದ ಪರಿಣಾಮ ಭೂಮಿತಾಯಿ ವಿದ್ಯಾರ್ಥಿಗಳಿಗೆ ಉತ್ತಮ ಫಸಲು ನೀಡುವ ನಿರೀಕ್ಷೆ ಹುಟ್ಟಿಸಿದ್ದಾಳೆ. ವಿದ್ಯಾರ್ಥಿಗಳ ಬೆವರಿನ ಪರಿಶ್ರಮಕ್ಕೆ ಪ್ರತಿಫಲ ಸಿಗುವ ಕಾಲ ಸನ್ನಿಹಿತವಾಗಿದೆ.
ಬಂಟ್ವಾಳ ಶಾಸಕ ರಾಜೇಶ್ ನಾಕ್ ಸ್ವತಃ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳಿಗೆ ನೇಜಿ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಬಿಸಿಎಂ ಇಲಾಖೆಯ ಜಿಲ್ಲಾಧಿಕಾರಿ ಬಿಂದಿಯಾ ನಾಯಕ್ ಮಾರ್ಗದರ್ಶನ ಮಾಡಿದ್ದರು. ನಿಲಯ ಮೇಲ್ವಿಚಾರಕಿ ಭವಾನಿ ಮುಂದಾಳತ್ವ ವಹಿಸಿದ್ದರು. ಊರಿನ ಗಣ್ಯರು, ಇಲಾಖೆ ಸಿಬ್ಬಂದಿ ಭಾಗವಹಿಸಿದ್ದರು. ಅಂದು ಹಾಸ್ಟೆಲ್ ವಿದ್ಯಾರ್ಥಿಗಳು ಕೆಸರಿನಲ್ಲಿ ವಿವಿಧ ಆಟೋಟಗಳನ್ನು ಆಡಿ ಸಂಭ್ರಮಿಸಿದ್ದರು. ಬಳಿಕ ಕೃಷಿಕ ಮಹಿಳೆಯರ ಮಾರ್ಗದರ್ಶನ ಪಡೆದು ನೇಜಿ ಕಿತ್ತು ಒಂದು ಮುಡಿ ವಿಸ್ತೀರ್ಣದ ಎರಡು ಗದ್ದೆಯಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳು ನೇಜಿ ನಾಟಿ ಮಾಡಿ ಕೃಷಿ ಪಾಠವನ್ನು ಕರಗತ ಮಾಡಿಕೊಂಡರು. ಬಾಗಲಕೋಟೆ, ರಾಯಚೂರು ಮೊದಲಾದ ಹೊರಜಿಲ್ಲೆಗಳ ವಿದ್ಯಾರ್ಥಿಗಳು ಈ ಹಾಸ್ಟೆಲ್ಗಳಲಿದ್ದು, ಸುಮಾರು 300 ಮಂದಿ ವಿದ್ಯಾರ್ಥಿಗಳು ಈ ಚಟುವಟಿಕೆಯಲ್ಲಿ ಪಾಲ್ಗೊಂಡರು.
ಆಟದ ಜತೆಗೆ ಪಾಠ
ಸೆ.5ರಂದು ವಾಮದಪದವು ಬಳಿಯ ವಾಂಬೆಟ್ಟುವಿನಲ್ಲಿ ಸ್ಥಳೀಯರಾದ ಯಜ್ಞನಾರಾಯಣ ಎಂಬುವರ ಅರ್ಧ ಎಕರೆ ವಿಸ್ತೀರ್ಣದ ಗದ್ದೆಯಲ್ಲಿ ವಾಮದಪದವು, ಚೆನ್ನೈತ್ತೋಡಿಯಲ್ಲಿರುವ ಶ್ರೀ ದೇವರಾಜ ಅರಸು ಮೆಟ್ರಿಕ್ ನಂತರದ ಹಾಸ್ಟೆಲ್ ವಿದ್ಯಾರ್ಥಿನಿಯರು ಹಾಗೂ ಮೆಟ್ರಿಕ್ ಪೂರ್ವ ಬಾಲಕರ ನಿಲಯದ ವಿದ್ಯಾರ್ಥಿಗಳಿಗೆ ಕೃಷಿ ಕಲಿ-ನಲಿ ಎನ್ನುವ ಕೃಷಿ ಆಟದ ಜತೆಗೆ ಕೃಷಿಯ ಕಲಿಕೆಯ ಬಗ್ಗೆ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕನಸು ನನಸಾಯಿತು
ಹಾಸ್ಟೆಲ್ ವಿದ್ಯಾರ್ಥಿಗಳಿಂದಲೇ ಗದ್ದೆಯಲ್ಲಿ ಭತ್ತದ ಬೇಸಾಯ ನಡೆಸಿ ಕೃಷಿಯ ಬಗ್ಗೆ ಪ್ರಾಯೋಗಿಕ ಅನುಭವ ನೀಡಬೇಕೆನ್ನುವುದು ವಾಮದಪದವಿನ ಬಿಸಿಎಂ ಹಾಸ್ಟೆಲ್ನ ನಿಲಯ ಮೇಲ್ವಿಚಾರಕಿ ಭವಾನಿ ಅವರ ಕನಸಾಗಿತ್ತು. ವಾಮದಪದವಿನ ವಾಂಬೆಟ್ಟುವಿನ ಯಜ್ಞ ನಾರಾಯಣ ವಿದ್ಯಾರ್ಥಿಗಳ ಬೇಸಾಯ ಚಟುವಟಿಕೆಗೆ ಗದ್ದೆ ನೀಡಿ ಸಹಕರಿಸಿದ್ದರು. ಬೀಜ ಬಿತ್ತನೆ, ನೇಜಿ ಕೊಯ್ಲು, ನೇಜಿ ನಾಟಿ, ಔಷಧ ಸಿಂಪಡಣೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದರು. ಇದೀಗ ಪೈರು ಬಿಡುವ ಹಂತಕ್ಕೆ ಬಂದಿದ್ದು, ಭವಾನಿ ಅವರ ಕನಸು, ವಿದ್ಯಾರ್ಥಿಗಳ ಪರಿಶ್ರಮಕ್ಕೆ ಫಲ ಸಿಗುವ ಕಾಲ ಬಂದಿದೆ. ಇಲಾಖೆಯ ಅಧಿಕಾರಿ ಬಿಂದಿಯಾ ನಾಯಕ್ ಅವರ ಸಹಕಾರ, ಮಾರ್ಗದರ್ಶನ ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಲು ಸಾಧ್ಯವಾಗಿದೆ ಎನ್ನುತ್ತಾರೆ ಭವಾನಿ.
ಅನ್ನವನ್ನು ಪರಬ್ರಹ್ಮ ಎನ್ನುತ್ತಾರೆ. ಆದರೆ ಈಗಿನ ಹೆಚ್ಚಿನ ಮಕ್ಕಳಿಗೆ ಅಕ್ಕಿ ಹೇಗೆ ತಯಾರಾಗುತ್ತದೆ ಎನ್ನುವುದೇ ಗೊತ್ತಿರುವುದಿಲ್ಲ. ಆ ಕಾರಣಕ್ಕಾಗಿ ಮಕ್ಕಳಲ್ಲಿ ಭತ್ತ ಬೇಸಾಯದ ಅರಿವು ಮೂಡಿಸಲು ಹಾಸ್ಟೆಲ್ ವಿದ್ಯಾರ್ಥಿನಿಯರಿಂದ ಸಾಗುವಳಿ ಮಾಡಿಸಿದ್ದೇವೆ. ಇದರ ಜತೆಗೆ ಇತ್ತೀಚಿನ ದಿನಗಳಲ್ಲಿ ಅನೇಕ ಗದ್ದೆಗಳು ಹಡಿಲು ಬೀಳುತ್ತಿದ್ದು, ಅವುಗಳನ್ನು ತಪ್ಪಿಸಲು ನಮ್ಮಿಂದ ಸಣ್ಣ ಪ್ರಯತ್ನ ಇದಾಗಿದೆ. ಬಿಂದಿಯಾ ನಾಯಕ್, ಜಿಲ್ಲಾಧಿಕಾರಿ ಬಿಸಿಎಂ ಇಲಾಖೆ ನಮ್ಮ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಕೃಷಿಯ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಕೃಷಿ ಕಲಿ-ನಲಿ ಕಾರ್ಯಕ್ರಮವನ್ನು ಸೆ.5ರಂದು ಹಮ್ಮಿಕೊಳ್ಳಲಾಗಿತ್ತು. ಹಾಸ್ಟೆಲ್ ವಿದ್ಯಾರ್ಥಿಗಳು ಕೆಸರಿನಲ್ಲಿ ಆಡಿ ಸಂಭ್ರಮಿಸುವುದರ ಜತೆಗೆ ನೇಜಿ ನಾಟಿ ಮಾಡಿ ಕೃಷಿ ವಿದ್ಯೆಯನ್ನು ಅರಿತುಕೊಂಡಿದ್ದರು. ಇದೀಗ ಪೈರು ತೆನೆ ಬಿಡುತ್ತಿರುವುದು ಖುಷಿ ಮೂಡಿಸಿದೆ. ಭವಾನಿ, ನಿಲಯ ಮೇಲ್ವಿಚಾರಕಿ