ಬಂಟ್ವಾಳ: ಪಡಿತರ ವಿತರಣೆಯ ಸರ್ವರ್ ಸಮಸ್ಯೆ ನಿವಾರಣೆ ಮಾಡುವಂತೆ ಸಿದ್ದಕಟ್ಟೆ ವ್ಯವಸಾಯಿಕ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಆರೋಗ್ಯ ಮತ್ತು ನಾಗರಿಕ ಸರಬರಾಜು ಖಾತೆ ಸಚಿವರಿಗೆ ಪತ್ರ ಮುಖೇನ ಮನವಿ ಮಾಡಿದ್ದಾರೆ.
ಪಡಿತರ ಸಾಮಗ್ರಿ ವಿತರಣೆ ಮಾಡುವ ಸಂದರ್ಭ ಸರ್ವರ್ ಸಮಸ್ಯೆಯಿಂದಾಗಿ ಗ್ರಾಮಾಂತರ ಪ್ರದೇಶಗಳಲ್ಲಿ ಗ್ರಾಹಕರಿಗೆ ತುಂಬಾ ತೊಂದರೆಯಾಗುತ್ತಿದೆ. ಪ್ರಾಥಮಿಕ ಸಹಕಾರ ಸಂಘಗಳ ಮೂಲಕ ನ್ಯಾಯ ಬೆಲೆ ಅಂಗಡಿಗಳಲ್ಲಿ ದಿನಂಪ್ರತಿ ನೂರಾರು ಗ್ರಾಹಕರು ಬೆಳಗ್ಗೆ ಪಡಿತರ ಪಡೆಯಲು ಬರುತ್ತಿದ್ದು, ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಸಿಗದೆ ವಾಪಾಸು ಹೋಗುತ್ತಿದ್ದಾರೆ. ತಿಂಗಳಿನ ಪಡಿತರ ಪಡೆಯಲು 4-5 ದಿನ ಗ್ರಾಹಕರು ದಿನ ಕೆಲಸ ಬಿಟ್ಟು ಬರುತ್ತಿದ್ದು, ಕೂಲಿ ಕಾರ್ಮಿಕ ಬಡ ಕುಟುಂಬಗಳಿಗೆ ಸಮಸ್ಯೆಯಾಗುತ್ತಿದೆ. ಸರ್ವರ್ ಸಮಸ್ಯೆಯಿಂದಾಗಿ ಪಡಿತರ ಪಡೆಯಲು ಸಾಧ್ಯವಾಗದ ಗ್ರಾಹಕರು ಸಹಕಾರ ಸಂಘಗಳ ಆಡಳಿತ ಮಂಡಳಿ ನಿರ್ದೇಶಕರಿಗೆ ಹಿಡಿಶಾಪ ಹಾಕುತ್ತಾ ಕಿರಿಕಿರಿ ಮಾಡುತ್ತಿದ್ದಾರೆ. ಹಲವು ತಿಂಗಳುಗಳಿಂದ ಸಮಸ್ಯೆ ಮುಂದುವರಿದು ಶಾಶ್ವತ ಪರಿಹಾರ ಕಂಡಿಲ್ಲ.
ಆದುದರಿಂದ, ಬಡ ಬಿಪಿಎಲ್ ಕುಟುಂಬಗಳಿಗೆ ಸಹಕಾರಿಯಾಗುವಂತೆ ಪಡಿತರ ಪಡೆಯುವಲ್ಲಿನ ಸರ್ವರ್ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವಂತೆ ಅವರು ಪತ್ರದಲ್ಲಿ ಆಗ್ರಹಿಸಿದ್ದಾರೆ.