

ಚೆನ್ನೈ: ಕಾಲಿವುಡ್(Kollywood) ನಟ ಜಯಂ ರವಿ ತಮ್ಮ ಪತ್ನಿಯಿಂದ ಬೇರ್ಪಡುವುದಾಗಿ ಸಾರ್ವಜನಿಕವಾಗಿ ಬಹಿರಂಗಗೊಳಿಸಿದಾಗಿನಿಂದ ಅವರ ವಿಚ್ಛೇದನದ ಹಿಂದಿನ ಕಾರಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅನೇಕ ಊಹಾಪೋಹಗಳು ಹರಿದಾಡುತ್ತಿವೆ. ಬಳಿಕ ಅವರ ಪತ್ನಿ ಆರತಿ ಅನುಮತಿಯಿಲ್ಲದೆ ವಿಚ್ಛೇದನ ಪಡೆಯುತ್ತಿರುವುದಾಗಿ ಅಳಲು ತೋಡಿಕೊಂಡರು. ವಿಚ್ಛೇದನದ ವಿಚಾರದಲ್ಲಿ ಹಿಂದೆ ಸರಿಯುವುದಿಲ್ಲ ಎಂದು ರವಿ ಹೇಳಿದರೆ, ಪತಿಯೊಂದಿಗೆ ಖಾಸಗಿಯಾಗಿ ಮಾತನಾಡುವ ಅವಕಾಶಕ್ಕಾಗಿ ಇನ್ನೂ ಕಾಯುತ್ತಿದ್ದೇನೆ ಎಂದು ಆರತಿ ಹೇಳುತ್ತಾರೆ.
ಇದೇ ವೇಳೆ ತಮ್ಮ ವಿಚ್ಛೇದನಕ್ಕೆ ಇದೇ ಕಾರಣ ಎಂದು ಗಾಯಕಿಯೊಬ್ಬಳ ಹೆಸರು ತೆರೆ ಮೇಲೆ ಬಂದ ತಕ್ಷಣವೇ ಆಕೆಯನ್ನು ಇದರಲ್ಲಿ ಎಳೆದು ತರಬೇಡಿ ಎಂದು ಜಯಂ ರವಿ ತಾಕೀತು ಮಾಡಿದ್ದರು. ಅಲ್ಲದೇ ಜಯಂ ರವಿಗೆ ಆರತಿ ಬೆದರಿಕೆ ಹಾಕಿದ್ದಾರೆ ಎಂದು ಜಾಲತಾಣಗಳಲ್ಲಿ ಪ್ರಚಾರ ನಡೆದಿತ್ತು. ಅವರ ಎಲ್ಲಾ ಸೋಷಿಯಲ್ ಮೀಡಿಯಾ ಅಕೌಂಟ್ಗಳು ಆರತಿ ಅವರ ಹಿಡಿತದಲ್ಲಿದ್ದು, ಅವುಗಳನ್ನು ತನಗೆ ಹಸ್ತಾಂತರಿಸದೆ ತೊಂದರೆ ನೀಡುತ್ತಿದ್ದಾರೆ ಎಂದು ರವಿ ಹೇಳಿದ್ದರು. ಈ ಹಿನ್ನಲೆಯಲ್ಲಿ ಇತ್ತೀಚೆಗೆ ಆರತಿ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ.
ನನ್ನ ವೈಯಕ್ತಿಕ ಬದುಕಿನ ಬಗ್ಗೆ ಸಾಕಷ್ಟು ಪ್ರಚಾರ ನಡೆಯುತ್ತಿದೆ. ನನ್ನನ್ನು ಕೆಟ್ಟದಾಗಿ ಕಾಣುವಂತೆ ಮಾಡಲು ಸತ್ಯವನ್ನು ಮುಚ್ಚಿಡಲು ಯತ್ನಿಸುತ್ತಿದ್ದಾರೆ. ಆದರೆ ನಾನು ಮೌನವಾಗಿರುವುದು ದೌರ್ಬಲ್ಯದ ಸಂಕೇತವಲ್ಲ. ಮೌನವಾಗಿರುವುದು ನನ್ನ ತಪ್ಪು ಎಂದು ಅರ್ಥವಲ್ಲ, ಸುಮ್ಮನೆ ಸಮಚಿತ್ತವಾಗಿರಲು ಬಯಸಿದೆ. ನನಗೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಇದೆ. ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆಯುತ್ತಿದ್ದೇವೆ ಎಂಬ ಪತ್ರವನ್ನು ಅವರು ಬಿಡುಗಡೆಗೊಳಿಸಿದಾಗ ನನಗೆ ನಿಜಕ್ಕೂ ಆಘಾತವಾಯಿತು ಎಂದು ಹೇಳಿದ್ದಾರೆ.
ಆಗ ಅವರು ನಾನು ಹೇಳಿದ್ದನ್ನು ತಪ್ಪಾಗಿ ಅರ್ಥೈಸಿಕೊಂಡರು. ಈ ವಿಷಯದ ಬಗ್ಗೆ ವೈಯಕ್ತಿಕವಾಗಿ ಅವರೊಂದಿಗೆ ಮಾತನಾಡಲು ನಾನು ಇನ್ನೂ ಅವಕಾಶಕ್ಕಾಗಿ ಕಾಯುತ್ತಿದ್ದೇನೆ. ನಾನು ಮದುವೆಯನ್ನು ಗೌರವಿಸುತ್ತೇನೆ. ಇಬ್ಬರ ಇಮೇಜ್‌ಗೆ ಧಕ್ಕೆ ತರುವಂತಹ ಯಾವುದೇ ಸಾರ್ವಜನಿಕ ಚರ್ಚೆಗೆ ನಾನು ಅವಕಾಶ ಮಾಡಿಕೊಡುವುದಿಲ್ಲ. ನನ್ನ ಕುಟುಂಬದ ಯೋಗಕ್ಷೇಮ ನನಗೆ ಮುಖ್ಯ ಎಂದು ಆರತಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಮಾಡಿರುವ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಹಿರಿಯ ಚಲನಚಿತ್ರ ಸಂಕಲನಕಾರ ಎ.ಮೋಹನ್ ಅವರ ಪುತ್ರ ಜಯಂ ರವಿ. ಜಯಂ, ದಾಸ್, ಮಳೆ, ಬೊಮ್ಮರಿಲ್ಲು, ಪೆರಣ್ಮೈ, ರೋಮಿಯೋ ಜೂಲಿಯೆಟ್, ಭೂಮಿ ಮತ್ತು ಸೈರನ್ ಮುಂತಾದ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆರತಿ ಅವರು ದೂರದರ್ಶನದ ನಿರ್ಮಾಪಕಿ ಸುಜಾತಾ ವಿಜಯಕುಮಾರ್ ಅವರ ಮಗಳು. ಜಯಂ ರವಿ ಮತ್ತು ಆರತಿ ಅವರಿಗೆ ಆರವ್ ಮತ್ತು ಅಯಾನ್ ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ. (ಏಜೆನ್ಸೀಸ್)