

ಚೆನ್ನೈ: ಕಾಲಿವುಡ್ ನಟ ಜಯಂ ರವಿ(Jayam Ravi) ವಿಚ್ಛೇದನ ನೀಡಿರುವುದು ಗೊತ್ತೆ ಇದೆ. ಮದುವೆಯಾಗಿ 15 ವರ್ಷದ ಬಳಿಕ ತಮ್ಮ ವಿಚ್ಛೇದನ ನೀಡುತ್ತಿರುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಷಯವನ್ನು ಬಹಿರಂಗಪಡಿಸಿದ್ದರು. ಇದಾದ ಬಳಿಕ ಅವರ ಪತ್ನಿ ಆರತಿ ಅವರಿಂದಲೂ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಪತಿ-ಪತ್ನಿಯ ವಿವರಣೆ ನಡುವೆ ಸದ್ಯ ಜಯಂ ರವಿ ಒಬ್ಬ ಗಾಯಕಿಯೊಡನೆ ಡೇಟಿಂಗ್ ಮಾಡುತ್ತಿದ್ದಾರೆ. ಗೋವಾದಲ್ಲಿ ಪದೇಪದೆ ಭೇಟಿಯಾಗುತ್ತಿರುತ್ತಾರೆ ಎಂಬ ಸುದ್ದಿ ವೈರಲ್ ಆಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಜಯಂ ರವಿ ಸ್ಪಷ್ಟನೆ(clarification) ನೀಡದ್ದಾರೆ.
ವಿಚ್ಛೇದನ ಘೋಷಿಸಿದ ಬಳಿಕ ಆರತಿ ಅವರು, ಈ ವಿಚಾರ ನನಗೆ ಸಾಮಾಜಿಕ ಜಾಲತಾಣದ ಮೂಲಕ ಗೊತ್ತಾಗಿದೆ. ನನ್ನ ಪತಿ ವಿಚ್ಛೇದನ ನೀಡುತ್ತಾರೆ ಎಂದು ನನಗೆ ತಿಳಿದಿರಲಿಲ್ಲ ಎಂದು ಹೇಳಿದ್ದರು. ಆದಾದ ಬಳಿಕ ತಮ್ಮ ವಿಚ್ಛೇದನದ ನಿರ್ಧಾರದ ಬಗ್ಗೆ ಜಯಂ ರವಿ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಟಿಪ್ಪಣಿಯನ್ನು ಬರೆದಿದ್ದರು. ಬಹಳ ಆಲೋಚಿಸಿ, ಚರ್ಚೆಗಳ ಬಳಿಕ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ತರಾತುರಿಯಿಂದ ಈ ನಿರ್ಧಾರವನ್ನು ತೆಗೆದುಕೊಂಡಿಲ್ಲ. ಉತ್ತಮ ಹಿತಾಸಕ್ತಿಗಾಗಿ ಹಾಗೂ ವೈಯಕ್ತಿಕ ಕಾರಣಗಳಿಂದಾಗಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಪ್ರತಿಯೊಬ್ಬ ಅಭಿಮಾನಿಯೂ ತಮ್ಮ ಖಾಸಗಿತನವನ್ನು ಗೌರವಿಸಬೇಕು. ಬೇರೆ ಯಾವುದೇ ಊಹಾಪೋಹಗಳನ್ನು ಮಾಡಬಾರದು ಎಂದು ತಿಳಿಸಿದ್ದರು.
ಆದರೆ ಇತ್ತೀಚೆಗೆ ಕಾಲಿವುಡ್ ಅಂಗಳದಲ್ಲಿ ವಿಚ್ಛೇದನದ ನಂತರ ನಟ ಜಯಂ ರವಿ ಅವರು ಗಾಯಕಿ ಕೆನಿಶಾ ಫ್ರಾನ್ಸಿಸ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹರಿದಾಡುತ್ತಿದೆ. ಈ ಬಗ್ಗೆ ಮೌನ ಮುರಿದ ನಟ ಜಯಂ ರವಿ ಹೇಳಿದ್ದು ಹೀಗೆ..
ನಾನು ಹೇಳುವುದು ಇಷ್ಟೆ. ಬದುಕಿ ಮತ್ತು ಬದುಕಲು ಬಿಡಿ. ಇದರಲ್ಲಿ ಯಾರೊಬ್ಬರ ಹೆಸರನ್ನು ಎಳೆದು ತರುವುದು ಸರಿಯಲ್ಲ. ವೈಯಕ್ತಿಕ ಜೀವನವು ವೈಯಕ್ತಿಕವಾಗಿರಲಿ. ಬೇರೊಬ್ಬರ ಹೆಸರು ತಳುಕು ಹಾಕಿ ನನ್ನ ಹೆಸರು ಹಾಳು ಮಾಡಲು ಪ್ರಯತ್ನಿಸಲಾಗುತ್ತಿದೆ. ಕೆನಿಶಾ ಒಬ್ಬರೆ ಇಷ್ಟು ಬೆಳದಿದ್ದಾರೆ. 600ಕ್ಕೂ ಹೆಚ್ಚು ಸ್ಟೇಜ್ ಶೋಗಳನ್ನು ನೀಡಿದ್ದಾರೆ. ಅವರು ಲೈಸೆನ್ಸ್ ಪಡೆದಿರುವ ಮನಶ್ಶಾಸ್ತ್ರಜ್ಞರಾಗಿದ್ದಾರೆ. ಖಿನ್ನತೆಯಲ್ಲಿರುವ ಹಲವರಿಗೆ ಚಿಕಿತ್ಸೆ ನೀಡಿದ್ದಾರೆ. ಮುಂದೆ ನಮ್ಮಿಬ್ಬರ ಸಹಭಾಗಿತ್ವದಲ್ಲಿ ಹೀಲಿಂಗ್ ಸೆಂಟರ್ ತೆಗೆಯಬೇಕೆಂಬ ಯೋಜನೆಯಲ್ಲಿದ್ದೇವೆ. ದಯವಿಟ್ಟು ಅದನ್ನು ಹಾಳುಮಾಡಬೇಡಿ. ಯಾರು ಅದನ್ನು ಹಾಳು ಮಾಡಲು ಸಾಧ್ಯವಿಲ್ಲ. ಆಕೆಯನ್ನು ಅನಗತ್ಯವಾಗಿ ವಿಚ್ಛೇದನದ ವಿಚಾರದಲ್ಲಿ ತೊಡಗಿಸಬೇಡಿ ಎಂದಿದ್ದಾರೆ.
ಹಿರಿಯ ಚಲನಚಿತ್ರ ಸಂಕಲನಕಾರ ಎ.ಮೋಹನ್ ಅವರ ಪುತ್ರ ಜಯಂ ರವಿ. ಜಯಂ, ದಾಸ್, ಮಳೆ, ಬೊಮ್ಮರಿಲ್ಲು, ಪೆರಣ್ಮೈ, ರೋಮಿಯೋ ಜೂಲಿಯೆಟ್, ಭೂಮಿ ಮತ್ತು ಸೈರನ್ ಮುಂತಾದ ಚಿತ್ರಗಳಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಆರತಿ ಅವರು ದೂರದರ್ಶನದ ನಿರ್ಮಾಪಕಿ ಸುಜಾತಾ ವಿಜಯಕುಮಾರ್ ಅವರ ಮಗಳು. ಜಯಂ ರವಿ ಮತ್ತು ಆರತಿ ಅವರಿಗೆ ಆರವ್ ಮತ್ತು ಅಯಾನ್ ಎಂಬ ಇಬ್ಬರು ಗಂಡುಮಕ್ಕಳಿದ್ದಾರೆ. (ಏಜೆನ್ಸೀಸ್)