ಕೆಎಲ್ ರಾಹುಲ್‌ಗೆ ಮತ್ತೆ ಫಜೀತಿ ತಂದ ಕಾಫಿ!

cofee
Published on

ಬೆಂಗಳೂರು: ಕಳೆದ ವರ್ಷದ ಆರಂಭದಲ್ಲಿ ಟೀಮ್ ಇಂಡಿಯಾ ಆಟಗಾರರಾದ ಹಾರ್ದಿಕ್ ಪಾಂಡ್ಯ ಮತ್ತು ಕನ್ನಡಿಗ ಕೆಎಲ್ ರಾಹುಲ್ ‘ಕಾಫಿ ವಿತ್ ಕರಣ್’ ಟಿವಿ ಚಾಟ್ ಶೋದಲ್ಲಿ ಪಾಲ್ಗೊಂಡು, ಮಹಿಳೆಯರ ಬಗ್ಗೆ ಅವಹೇಳನಕಾರಿ ಹೇಳಿಕೆಗಳನ್ನು ನೀಡುವ ಮೂಲಕ ವಿವಾದಕ್ಕೆ ಗ್ರಾಸವಾಗಿದ್ದರು. ಆ ವಿವಾದದಿಂದ ಪಾಠ ಕಲಿತಿದ್ದೆ ಮತ್ತು ಕ್ರಿಕೆಟ್‌ನತ್ತ ಹೆಚ್ಚಿನ ಗಮನ ಹರಿಸಿದ್ದೆ ಎಂದು ಕೆಎಲ್ ರಾಹುಲ್ ಇತ್ತೀಚೆಗೆ ಹೇಳಿಕೊಂಡಿದ್ದರು. ಇದರ ನಡುವೆ ಇದೀಗ ಅವರು ಮತ್ತೊಮ್ಮೆ ಕಾಫಿಯಿಂದಲೇ ಫಜೀತಿಗೆ ಸಿಲುಕಿಕೊಂಡಿದ್ದಾರೆ!

ಟೀಮ್ ಇಂಡಿಯಾ ಬ್ಯಾಟ್ಸ್‌ಮನ್ ಹಾಗೂ ಅರೆಕಾಲಿಕ ವಿಕೆಟ್ ಕೀಪರ್ ರಾಹುಲ್ ಟ್ವಿಟರ್‌ನಲ್ಲಿ, ಕಾಫಿ ಕುಡಿಯುತ್ತಿರುವ ಚಿತ್ರವನ್ನು ಪ್ರಕಟಿಸಿದ್ದರು. ಈ ಮೂಲಕ ಕಾಫಿಯನ್ನು ಪ್ರೀತಿಸುವುದಾಗಿ ಘೋಷಿಸಿಕೊಂಡಿದ್ದರು. ಆದರೆ ಇದರ ಬೆನ್ನಲ್ಲೇ ಅವರ ಅಭಿಮಾನಿಗಳು ಟ್ರೋಲ್ ಮಾಡಲು ಆರಂಭಿಸಿದ್ದರು. ಕಾಫಿ ವಿತ್ ಕರಣ್ ಕಾರ್ಯಕ್ರಮದ ವಿವಾದವನ್ನೇ ಮತ್ತೆ ನೆನಪಿಸಿದ ಅಭಿಮಾನಿಗಳು, ವಿವಿಧ ರೀತಿಯಲ್ಲಿ ರಾಹುಲ್ ಕಾಲೆಳೆದಿದ್ದಾರೆ.

‘ದಯವಿಟ್ಟು ಕಾಫಿಯಿಂದ ದೂರವಿರಿ’ ಎಂದು ಒಬ್ಬರು ಕಮೆಂಟ್ ಹಾಕಿದ್ದರೆ, ‘ಕರಣ್ ಜೋಹರ್‌ರನ್ನೂ ಕರೆಯಲೇ’ ಎಂದು ಇನ್ನೊಬ್ಬರು ಬರೆದಿದ್ದಾರೆ. ‘ಕಾಫಿ ವಿತ್ ಕರಣ್ ನಿಮ್ಮ ವೃತ್ತಿಜೀವನಕ್ಕಿಂತಲೂ ದುಬಾರಿ’ ಎಂದು ಇನ್ನೊಬ್ಬರು ಬರೆದಿದ್ದಾರೆ. ರಾಹುಲ್ ಇನ್‌ಸ್ಟಾಗ್ರಾಂನಲ್ಲೂ ಪ್ರಕಟಿಸಿರುವ ಈ ಚಿತ್ರಕ್ಕೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಕೂಡ ಕಮೆಂಟ್ ಹಾಕಿದ್ದು, ‘ಕಪ್ ಗಂದಾ ಹೈ’ ಎಂದು ಬರೆದಿದ್ದಾರೆ.

2019ರ ಕಾಫಿ ವಿತ್ ಕರಣ್ ವಿವಾದದಿಂದಾಗಿ ಕೆಎಲ್ ರಾಹುಲ್ ಮತ್ತು ಹಾರ್ದಿಕ್ ಪಾಂಡ್ಯ ಆಸ್ಟ್ರೇಲಿಯಾ ಪ್ರವಾಸದಿಂದ ಅರ್ಧದಲ್ಲೇ ವಾಪಸಾಗಿದ್ದರು. ಬಳಿಕ ಅವರಿಬ್ಬರಿಗೂ ತಲಾ 20 ಲಕ್ಷ ರೂ. ದಂಡ ಹಾಕಲಾಗಿತ್ತು. ‘ಆ ವಿವಾದದ ಬಳಿಕ ಸ್ಥಿರ ನಿರ್ವಹಣೆಯತ್ತ ಗಮನ ಹರಿಸಿದ್ದೆ. ಆಗಿನ ಅಮಾನತು ಶಿಕ್ಷೆಯ ಬಳಿಕ ನಾನು ಸ್ವಾರ್ಥಿಯಾಗಿ ನನ್ನ ಆಟದ ಬಗೆಗಷ್ಟೇ ಗಮನವಿಟ್ಟಿದ್ದೆ. ತಂಡಕ್ಕೆ ಅಗತ್ಯವಾಗಿರುವುದನ್ನು ಮಾಡಲು ಬಯಸಿದ್ದೆ. ನನ್ನ ವೃತ್ತಿಜೀವನದಲ್ಲಿ ಇನ್ನು 12-11 ವರ್ಷಗಳಷ್ಟೇ ಬಾಕಿ ಉಳಿದಿದ್ದು, ನನ್ನ ಸಮಯವನ್ನು ಆಟಕ್ಕೆ ಅರ್ಪಿಸಿಕೊಳ್ಳಲು ನಿರ್ಧರಿಸಿದ್ದೆ’ ಎಂದು ಕರ್ನಾಟಕದ 28 ವರ್ಷದ ಬ್ಯಾಟ್ಸ್‌ಮನ್ ಹೇಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net