ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್ ಆರಂಭವಾಗುವುದಕ್ಕೆ ತಿಂಗಳುಗಳ ಕಾಲ ಬಾಕಿ ಉಳಿದಿದ್ದು, ಈಗಾಗಲೇ ಪ್ರತಿನಿತ್ಯ ಒಂದಿಲ್ಲೊಂದು ಕಾರಣಕ್ಕೆ ಸದ್ದು ಮಾಡುತ್ತಿದೆ. ಇದರಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ವಿಚಾರವೆಂದರೆ ಅದು ಮೆಗಾ ಹರಾಜು ಪ್ರಕ್ರಿಯೆ ಎಂದರೆ ತಪ್ಪಾಗಲಾರದು. ಈಗಾಗಲೇ ಮೆಗಾ ಹರಾಜಿಗೆ ಸಂಬಂಧಿಸಿದಂತೆ ಫ್ರಾಂಚೈಸಿಗಳು ಪ್ರಮುಖ ಆಟಗಾರರನ್ನು ತಮ್ಮತ್ತ ಸೆಳೆದುಕೊಳ್ಳಲು ಸಿದ್ಧತೆ ನಡೆಸಿದ್ದು, ಆರ್ಸಿಬಿ ಕೂಡ ನಾವು ತಂಡಕ್ಕಿಂತ ಕಡಿಮೆ ಇಲ್ಲ ಎಂದು ಸಾಬೀತು ಮಾಡಲು ಹೊರಟಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು 2008ರಿಂದ ಐಪಿಎಲ್ನ ಭಾಗವಾಗಿರುವ ಫ್ರಾಂಚೈಸಿಗಳಲ್ಲಿ ಒಂದಾಗಿದೆ. ಇದುವರೆಗೆ ಆಡಿದ ಎಲ್ಲಾ 17 ಋತುಗಳಲ್ಲಿ ಭಾಗವಹಿಸಿರುವ ತಂಡವು ವಿಶ್ವದ ಟಾಪ್ಮೋಸ್ಟ್ ಫ್ರಾಂಚೈಸಿಗಳಲ್ಲಿ ಒಂದಾಗಿದ್ದು, ಈವರೆಗೆ ಒಂದು ಕಪನ್ನು ಗೆಲ್ಲದಿರುವುದು ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ. ಪ್ರತಿಬಾರಿಯೂ ಕಪ್ ಗೆಲ್ಲುವ ಹುಮ್ಮಸ್ಸಿನೊಂದಿಗೆ ಕಣಕ್ಕಿಳಿಯುವ ಆರ್ಸಿಬಿ ಅಂತಿಮ ಕ್ಷಣದಲ್ಲಿ ಇದರಿಂದ ವಂಚಿತವಾಗುತ್ತಿದೆ. ಸುದೀರ್ಘ ಕಪ್ ಬರವನ್ನು ನೀಗಿಸಲು ಮುಂದಾಗಿರುವ ಫ್ರಾಂಚೈಸಿ ತಂಡದಲ್ಲಿ ನಾಲ್ಕು ಬದಲಾವಣೆಗಳಿಗೆ ಮುಂದಾಗಿದ್ದು, ಇದು ಆಗಲೆಂದು ಅಭಿಮಾನಿಗಳು ದೇವರ ಮೊರ ಹೋಗಿದ್ದಾರೆ.
ಇದನ್ನೂ ಓದಿ: ಹರಿಯಾಣ ಚುನಾವಣಾ ಅಖಾಡಕ್ಕಿಳಿದ ಕುಸ್ತಿಪಟು ವಿನೇಶ್ ಪೋಗಟ್ ಒಟ್ಟು ಆಸ್ತಿ ಎಷ್ಟು ಗೊತ್ತೇ?
ಸದ್ಯ ಕೇಳಿ ಬಂದಿರುವ ಮಾಹಿತಿ ಪ್ರಕಾರ ಕನ್ನಡಿಗ ಕೆ.ಎಲ್. ರಾಹುಲ್ ಲಖನೌ ತಂಡವನ್ನು ತೊರೆಯಲು ಸಿದ್ದವಾಗಿದ್ದು, ಆರ್ಸಿಬಿ ಸೇರುವುದು ಪಕ್ಕಾ ಎಂದು ವರದಿಯಾಗಿದೆ. ಇದಲ್ಲದೆ ಮುಂಬೈ ಇಂಡಿಯನ್ಸ್ ತಂಡದ ಮಾಜಿ ನಾಯಕ ರೋಹಿತ್ ಶರ್ಮ ಕೂಡ ಮೆಗಾ ಹರಾಜಿನಲ್ಲಿ ಆರ್ಸಿಬಿ ಪಾಲಾಗಲಿದ್ದಾರೆ ಎಂದು ಹೇಳಲಾಗಿದ್ದು, ಅವರು ತಂಡದ ನಾಯಕನಾಗಿ ನೇಮಕಗೊಳ್ಳುವುದು ಬಹುತೇಕ ಕನ್ಫರ್ಮ್ ಆಗಿದೆ. ಇದಲ್ಲದೆ ಆರ್ಸಿಬಿಗೆ ಸ್ಪಿನ್ನರ್ ಯಜುವೇಂದ್ರ ಚಹಲ್ ಕಮ್ಬ್ಯಾಕ್ ಮಾಡಲಿದ್ದಾರೆ ಎಂದು ವರದಿಯಾಗಿದೆ. ಇದೆಲ್ಲ ಸಾಧ್ಯವಾದರೆ ಈ ಸಲ ಕಪ್ ನಮ್ಮದಾಗುವುದು ಪಕ್ಕಾ ಎಂದು ಅಭಿಮಾನಿಗಳು ಆಶಿಸಿದ್ದಾರೆ.
ಇತ್ತ ಮೂವರು ಆಟಗಾರರು ಆರ್ಸಿಬಿ ಬರುತ್ತಿದ್ದರೆ ಅತ್ತ ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ರನ್ನು ತಂಡದಿಂದ ರಿಲೀಸ್ ಮಾಡುವುದು ಬಹುತೇಕ ಕನ್ಫರ್ಮ್ ಆಗಿದೆ. 2022 ರ ಮೆಗಾ-ಹರಾಜಿನಲ್ಲಿ ಆರ್ಸಿಬಿ ಸೇರಿಕೊಂಡ ಫಾಫ್ ಡು ಪ್ಲೆಸಿಸ್ ಎರಡು ಆವೃತ್ತಿಗಳಲ್ಲಿ (2022, 24) ತಂಡವನ್ನು ಪ್ಲೇಆಫ್ ಪ್ರವೇಶಿಸುವಂತೆ ಮಾಡಿದ್ದಾರೆ. ಆದರೆ, ತಂಡ ಫೈನಲ್ಗೇರುವಲ್ಲಿ ಮಾತ್ರ ವಿಫಲವಾಗಿದೆ. ಹೀಗಾಗಿ ಆರ್ಸಿಬಿ ವಿದೇಶಿ ನಾಯಕನ ಬದಲಾಗಿ ಸ್ವದೇಶಿಯವರಿಗೆ ಮಣೆ ಹಾಕಲು ನಿರ್ಧರಿಸಿದ್ದು, ಹೀಗಾಗಿ ವಯಸ್ಸು ಹಾಗೂ ಇನ್ನಿತರೆ ಕಾರಣಗಳನ್ನು ನೀಡಿ ಫಾಫ್ ಡು ಪ್ಲೆಸಿಸ್ರನ್ನು ತಂಡದಿಂದ ರಿಲೀಸ್ ಮಾಡುತ್ತಿದೆ. ಒಟ್ಟಿನಲ್ಲಿ 18ನೇ ಆವೃತ್ತಿಯ ಐಪಿಎಲ್ ಹಿಂದಿನ ಸೀಸನ್ಗಿಂತಲೂ ಈ ಬಾರಿ ಹೆಚ್ಚು ಸದ್ದು ಮಾಡಲಿದೆ.