

ಚಂಡೀಗಢ: ಅಧಿಕ ದೇಹತೂಕದಿಂದಾಗಿ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಪದಕದಿಂದ ವಂಚಿತರಾದ ಭಾರತ ಕುಸ್ತಪಟು ವಿನೇಶ್ ಪೋಗಟ್ ಈಗ ಹರಿಯಾಣದ ವಿಧಾನಸಭಾ ಚುನಾವಣಾ ಕಣಕ್ಕಿಳಿದಿದ್ದಾರೆ. ಈಗಾಗಲೆ ಜುಲಾನಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಈ ವೇಳೆ ತನ್ನ ಆಸ್ತಿ ಮೌಲ್ಯಗಳನ್ನೂ ಅವರು ಬಹಿರಂಗಪಡಿಸಿದ್ದಾರೆ.
ನಾಮಪತ್ರದ ಜತೆಗೆ ವಿನೇಶ್ ಪೋಗಟ್ ಸಲ್ಲಿಸಿರುವ ಅವಿದಾವಿತ್ ದಾಖಲೆಪತ್ರಗಳ ಪ್ರಕಾರ ಅವರು ಸುಮಾರು ಎರಡು ಕೋಟಿ ರೂ. ಆಸ್ತಿಯ ಒಡತಿಯಾಗಿದ್ದಾರೆ. ಪ್ರಸಕ್ತ ತನ್ನ ಬಳಿ 1.95 ಲಕ್ಷ ರೂ. ನಗದು ಹೊಂದಿರುವ ವಿನೇಶ್ 3 ಐಷಾರಾಮಿ ಕಾರುಗಳ ಒಡತಿಯೂ ಆಗಿದ್ದಾರೆ.
2023&2024ರ ಸಾಲಿನ ಆದಾಯ ತೆರಿಗೆ ವಿವರಗಳ ಪ್ರಕಾರ ವಿನೇಶ್ ಕಳೆದ ವಿತ್ತವರ್ಷದದಲ್ಲಿ 13,85,000 ರೂ. ಸಂಪಾದಿಸಿದ್ದಾರೆ. ಅವರ ಬಳಿಕ ವೊಲ್ವೊ ಎಕ್ಸ್ಸಿ 60 (35 ಲಕ್ಷ ರೂ.), ಹುಂಡೈ ಕ್ರೆಟಾ (12 ಲಕ್ಷ ರೂ) ಮತ್ತು ಟೊಯೊಟಾ ಇನ್ನೋವಾ (17 ಲಕ್ಷ ರೂ) ಕಾರುಗಳಿವೆ. ಹರಿಯಾಣ ಚುನಾವಣೆಯಲ್ಲಿ ಸ್ಪರ್ಧಿಸುವ ಸಲುವಾಗಿ ವಿನೇಶ್ ರೈಲ್ವೇಸ್ನಲ್ಲಿದ್ದ ತನ್ನ ಕೇಂದ್ರ ಸರ್ಕಾರದ ಉದ್ಯೋಗವನ್ನು ತ್ಯಜಿಸಿದ್ದರು.
ವಿನೇಶ್ ಪೋಗಟ್ ಪತಿ ಸೋಮ್ವೀರ್ ರಾಥಿಯ ವಾರ್ಷಿಕ ಆದಾಯ 3.44 ಲಕ್ಷ ರೂ. ಮಾತ್ರ ಆಗಿದ್ದು, ಕೈಯಲ್ಲಿ 15 ಸಾವಿರ ರೂ. ನಗದು ಹೊಂದಿದ್ದಾರೆ. ವಿನೇಶ್ ಪೋಗಟ್ ತನ್ನ ಇನ್ನೋವಾ ಕಾರು ಖರೀದಿಗಾಗಿ 13 ಲಕ್ಷ ರೂ. ಸಾಲವನ್ನೂ ಪಡೆದುಕೊಂಡಿದ್ದು, ಪ್ರಸಕ್ತ ಅದರ ಮರುಪಾವತಿ ಮಾಡುತ್ತಿದ್ದಾರೆ. ಸೋಮ್ವೀರ್ ಬಳಿಕ ಮಹೀಂದ್ರಾ ಸ್ಕಾರ್ಪಿಯೊ ಇದ್ದು, ಅದರ ಮೌಲ್ಯ 19 ಲಕ್ಷ ರೂ. ಆಗಿದೆ.