

ನವದೆಹಲಿ: ಆಸ್ಟ್ರೆಲಿಯಾ ತಂಡ ಇತ್ತೀಚೆಗೆ ಸ್ಕಾಟ್ಲೆಂಡ್ನಲ್ಲಿ ನಡೆದ ಟಿ20 ಸರಣಿಯಲ್ಲಿ 3&0 ಅಂತರದಿಂದ ಕ್ಲೀನ್ಸ್ವೀಪ್ ಸಾಧಿಸಿತು. ಆದರೆ ಸರಣಿಯ ಕೊನೇ ಪಂದ್ಯದ ನಂತರ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಆಸ್ಟ್ರೆಲಿಯಾ ತಂಡಕ್ಕೆ ಸಿಕ್ಕಿದ್ದು "ಐಸ್ಕ್ರೀಮ್ ಕಪ್'ನಂತಿದ್ದ ಟ್ರೋಫಿ! ಹೌದು, ಅಷ್ಟು ಸಣ್ಣ ಟ್ರೋಫಿಯನ್ನು ಕಂಡು, ಅದನ್ನು ಸ್ವೀಕರಿಸಲು ಬಂದ ಆಸ್ಟ್ರೆಲಿಯಾ ತಂಡದ ನಾಯಕ ಮಿಚೆಲ್ ಮಾರ್ಷ್ ಕೂಡ ಕಕ್ಕಾಬಿಕ್ಕಿಯಾಗಿದ್ದರು!
ಆಸ್ಟ್ರೆಲಿಯಾ ತಂಡ ಮಿನಿ ಬೌಲ್ನಂತಿರುವ ಆ ಟ್ರೋಫಿಯೊಂದಿಗೆ ಸಂಭ್ರಮಿಸಿರುವ ಚಿತ್ರ, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಈಗ ವೈರಲ್ ಆಗುತ್ತಿದ್ದು, ಆ ಟ್ರೋಫಿಯನ್ನು ನೆಟ್ಟಿಗರು, ಐಸ್ಕ್ರೀಮ್ ಕಪ್, ಟೀ ಕಪ್, ಕಡಾಯಿ ಎಂದೆಲ್ಲ ಕರೆದು ಟ್ರೋಲ್ ಮಾಡುತ್ತಿದ್ದಾರೆ.
ನಿಜಕ್ಕಾದರೆ ಅದು ಸ್ಕಾಟ್ಲೆಂಡ್ ದೇಶದಲ್ಲಿ ಸಾಂಪ್ರದಾಯಿಕವಾಗಿ ಅತ್ಯಂತ ಮಹತ್ವದ್ದಾಗಿರುವ "ಕ್ವಿಚ್' ಆಗಿದೆ. ಎರಡೂ ಕಡೆ ಹಿಡಿಗಳನ್ನು ಹೊಂದಿರುವ ಈ ಕ್ವಿಚ್ ಅನ್ನು ಸ್ಕಾಟ್ಲೆಂಡ್ ಜನರು ವಿಸ್ಕಿ ಅಥವಾ ಇತರ ಪಾನೀಯಗಳನ್ನು ಕುಡಿಯಲು ಬಳಸುತ್ತಾರೆ. ಅದನ್ನೇ ಟ್ರೋಫಿಯ ರೀತಿಯಲ್ಲಿ ವಿತರಿಸುವುದು ಸ್ಕಾಟ್ಲೆಂಡ್ ಕ್ರಿಕೆಟ್ ಸಂಸ್ಥೆಗೆ ಪ್ರತಿಷ್ಠೆಯೇ ಆಗಿತ್ತು. ಆದರೆ ಇತರ ದೇಶದ ಕ್ರಿಕೆಟ್ ಪ್ರೇಮಿಗಳ ಅದರ ಮಹತ್ವ ಅರಿಯದ ಕಾರಣ ಟ್ರೋಲ್ಗಳಿಗೆ ಒಳಗಾಗುವಂತಾಯಿತು.