ಒಲಿಂಪಿಕ್ಸ್​ ಪದಕ ಗೆದ್ದಿದ್ದಲ್ಲ, ಗಿಫ್ಟ್ ಸಿಕ್ಕಿದ್ದು ಎಂದು ಟೀಕಿಸಿದವರಿಗೆ ದಿಟ್ಟ ತಿರುಗೇಟು ನೀಡಿದ ಸೈನಾ ನೆಹ್ವಾಲ್​!

web saina
Published on

ನವದೆಹಲಿ: ಭಾರತೀಯ ಬ್ಯಾಡ್ಮಿಂಟನ್​ ತಾರೆ ಸೈನಾ ನೆಹ್ವಾಲ್​ ಸಾಮಾಜಿಕ ಜಾಲತಾಣದಲ್ಲಿ ತನ್ನನ್ನು ಟ್ರೋಲ್​ ಮಾಡಿದವರಿಗೆ ದಿಟ್ಟ ತಿರುಗೇಟು ನೀಡಿದ್ದಾರೆ. ಕಳೆದ ಕೆಲ ಸಮಯದಿಂದ ಸಾಮಾಜಿಕ ಜಾಲತಾಣದಲ್ಲಿ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ಸೈನಾ ಮತ್ತು ಅಭಿಮಾನಿಗಳ ನಡುವೆ ತಿಕ್ಕಾಟಗಳು ನಡೆಯುತ್ತಲೇ ಬರುತ್ತಿವೆ.

ಇತ್ತೀಚೆಗೆ ಪ್ಯಾರಿಸ್​ ಒಲಿಂಪಿಕ್ಸ್​ ಬಗ್ಗೆ ಸೈನಾ ನೀಡಿದ ಹೇಳಿಕೆಯೊಂದು ಕೂಡ ಇದೇ ರೀತಿ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿತ್ತು. ಈ ಬಗ್ಗೆ ಪಾಡ್​ಕಾಸ್ಟ್​ ಒಂದರಲ್ಲಿ ಮಾತನಾಡಿದ ಸೈನಾ ಪತಿ ಪಾರುಪಳ್ಳಿ ಕಶ್ಯಪ್​, 2012ರ ಲಂಡನ್​ ಒಲಿಂಪಿಕ್ಸ್​ನಲ್ಲಿ ಸೈನಾಗೆ ಕಂಚಿನ ಪದಕವನ್ನು ಉಡುಗೊರೆ ನೀಡಲಾಗಿತ್ತು ಎಂದೇ ಜನರು ಯೋಚಿಸುತ್ತಾರೆ ಎಂದಿದ್ದರು. ಪತಿಯ ಮಾತಿನ ನಂತರ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್​ಗಳು ಇನ್ನಷ್ಟು ಹೆಚ್ಚಾದ ಬಗ್ಗೆ ಪ್ರತಿಕ್ರಿಯಿಸಿರುವ ಸೈನಾ ನೆಹ್ವಾಲ್​, "ನನಗೆ ಒಲಿಂಪಿಕ್ಸ್​ನಲ್ಲಿ ಪದಕ ಉಡುಗೊರೆ ಲಭಿಸಿತು ಎಂದು ಯೋಚಿಸುವವರು ಮೊದಲಿಗೆ ತಾನು ಒಲಿಂಪಿಕ್ಸ್​ಗೆ ಕನಿಷ್ಠ ಅರ್ಹತೆ ಪಡೆಯುವ ಸಾಮರ್ಥ್ಯವನ್ನಾದರೂ ಹೊಂದಿದ್ದೇನೆಯೇ ಎಂಬುದನ್ನು ಅರಿತುಕೊಳ್ಳಬೇಕು' ಎಂದಿದ್ದಾರೆ.

2012ರ ಲಂಡನ್​ ಒಲಿಂಪಿಕ್ಸ್​ನಲ್ಲಿ ಕಂಚಿನ ಪದಕದ ಹೋರಾಟದ ವೇಳೆ ಎದುರಾಳಿ ಚೀನಾ ಆಟಗಾರ್ತಿ ವಾಂಗ್​ ಕ್ಸಿನ್​ ಮೊದಲ ಗೇಮ್​ ಗೆದ್ದು ಮುನ್ನಡೆ ಸಾಧಿಸಿದ್ದರೂ, 2ನೇ ಗೇಮ್​ ವೇಳೆ ಮೊಣಕಾಲು ಗಾಯಕ್ಕೆ ತುತ್ತಾದ ಕಾರಣ ಪಂದ್ಯವನ್ನು ಅರ್ಧದಲ್ಲೇ ತ್ಯಜಿಸಿದ್ದರು. ಹೀಗಾಗಿ ಒಲಿಂಪಿಕ್ಸ್​ ನಿಯಮಾವಳಿ ಪ್ರಕಾರ ಆಗ ಸೈನಾಗೆ ಹಿನ್ನಡೆಯಲ್ಲಿದ್ದ ನಡುವೆಯೂ ಕಂಚಿನ ಪದಕ ಒಲಿದಿತ್ತು.

ಇತ್ತೀಚೆಗೆ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿ ಕುಸ್ತಿಪಟು ವಿನೇಶ್​ ಪೋಗಟ್​ ಅಧಿಕ ದೇಹತೂಕದಿಂದಾಗಿ ಅನರ್ಹಗೊಂಡಾಗ ಸೈನಾ ನೀಡಿದ ಹೇಳಿಕೆಯೊಂದು ಹಲವು ನೆಟ್ಟಿಗರ ಆಕ್ಷೇಪಕ್ಕೆ ಕಾರಣವಾಗಿತ್ತು. ಕ್ರೀಡಾಪಟುಗಳಿಂದ ಈ ರೀತಿಯ ತಪ್ಪುಗಳು ಆಗಬಾರದು ಎಂದು ಸೈನಾ ಹೇಳಿದ್ದರು. ಇದಕ್ಕಾಗಿ ಹಲವರು ಸೈನಾರನ್ನು ಟೀಕಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net