ಕಿಚ್ಚನ ‘ಫ್ಯಾಂಟಮ್​’ ಫಸ್ಟ್​ಲುಕ್​ಗೆ ಶುರುವಾಗಿದೆ ಕ್ಷಣಗಣನೆ..

84682603_865000310602720_3746539533244563456_o
Published on

ಈಗಾಗಲೇ ಶೂಟಿಂಗ್ ಮತ್ತು ಸ್ನೀಕ್​ ಪಿಕ್​ಗಳ ಮೂಲಕವೇ ಸದ್ದು ಮಾಡುತ್ತಿರುವ ಫ್ಯಾಂಟಮ್​ ಚಿತ್ರತಂಡ ಇದೀಗ ಅಭಿಮಾನಿಗಳಿಗೆ ಮತ್ತೊಂದು ಉಡುಗೊರೆ ನೀಡಲು ಸಜ್ಜಾಗಿದೆ. ಈಗಾಗಲೇ ಶೂಟಿಂಗ್​ ಸೆಟ್​ನಲ್ಲಿ ಕಳೆದ ನಾಲ್ಕು ತಿಂಗಳ ಬಳಿಕ ಕ್ಯಾಮರಾ ಎದುರಿಸಿದ ಅನುಭವ ಹೇಳಿಕೊಂಡು, ಅದರ ಸಣ್ಣ ದೃಶ್ಯಗಳನ್ನು ಹಂಚಿಕೊಂಡಿದ್ದರು ಸುದೀಪ್​. ಇದೀಗ ಅವರ ಮಾಸ್​ ಲುಕ್​ ಬಗ್ಗೆ ಚಿತ್ರತಂಡ ಪೋಸ್ಟರ್​ವೊಂದನ್ನು ರಿವೀಲ್​ ಮಾಡಲು ಸಜ್ಜಾಗಿದೆ.

ಹೌದು, ಅನೂಪ್​ ಭಂಡಾರಿ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ಫ್ಯಾಂಟಮ್​ ಚಿತ್ರದಲ್ಲಿ ಕಿಚ್ಚ ಸುದೀಪ್​ ವಿಕ್ರಾಂತ್​ ರೋಣ ಪಾತ್ರದಲ್ಲಿ ಮತ್ತೊಮ್ಮೆ ಖಡಕ್​ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಗೊತ್ತಿರುವ ವಿಚಾರ. ಆದರೆ, ಅವರ ಪೂರ್ತಿ ಲುಕ್​ ಹೇಗಿದೆ ಎಂಬ ಬಗ್ಗೆ ಎಲ್ಲಿಯೂ ಬಹಿರಂಗವಾಗಿಲ್ಲ. ಇದೀಗ ಆ ಕುತೂಹಲಕ್ಕೆ ತೆರೆ ಬೀಳಲಿದ್ದು, ಸೋಮವಾರ ಬೆಳಗ್ಗೆ 10 ಗಂಟೆಗೆ ಫಸ್ಟ್ ಲುಕ್​ ರಿಲೀಸ್​ ಆಗಲಿದೆ.

ಈ ವಿಚಾರವನ್ನು ನಿರ್ದೇಶಕ ಅನೂಪ್​ ಭಂಡಾರಿ ಪುಟಾಣಿ ವಿಡಿಯೋ ಮೂಲಕ ತಿಳಿಸಿದ್ದಾರೆ. ಸದ್ಯ ಹೈದರಾಬಾದ್​ನಲ್ಲಿ ಶೂಟಿಂಗ್​ ನಡೆಯುತ್ತಿದ್ದು, ಶೂಟಿಂಗ್​ನಲ್ಲಿ ಪಾಲ್ಗೊಂಡ ತಾಂತ್ರಿಕ ವರ್ಗ, ನಿರ್ಮಾಪಕರು, ಕಲಾ ವಿಭಾಗ ಸೇರಿ ಎಲ್ಲರೂ ಫ್ಯಾಂಟಮ್​ ಲುಕ್​ಗೆ ಕಾಯುತ್ತಿರುವ ಬಗ್ಗೆ ಹೇಳಿಕೊಂಡಿದ್ದಾರೆ. ಜಾಕ್​ ಮಂಜು ನಿರ್ಮಾಣ ಮಾಡುತ್ತಿರುವ ಈ ಚಿತ್ರಕ್ಕೆ ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net