ಒಂದೇ ಸಿನಿಮಾದಲ್ಲಿ ಸಮಂತಾ ರಶ್ಮಿಕಾ!

Samantha
Published on

ಬೆಂಗಳೂರು: ಚಂದನವನದ ರಶ್ಮಿಕಾ ಮಂದಣ್ಣ, ಕನ್ನಡಕ್ಕಿಂತ ಪರಭಾಷೆಗಳಲ್ಲಿಯೇ ಹೆಚ್ಚೆಚ್ಚು ಸಿನಿಮಾ ಅವಕಾಶಗಳನ್ನು ಗಿಟ್ಟಿಸಿಕೊಳ್ಳುತ್ತಿದ್ದಾರೆ. ಅದರಲ್ಲೂ ಪಕ್ಕದ ಟಾಲಿವುಡ್​ನಲ್ಲಿ ಸ್ಟಾರ್ ನಟರ ಜತೆ ತೆರೆಹಂಚಿಕೊಂಡಿದ್ದ ಈ ಚೆಲುವೆ, ಈಗಲೂ ಹಲವು ದೊಡ್ಡ ದೊಡ್ಡ ಪ್ರಾಜೆಕ್ಟ್​ಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಹೀಗಿರುವಾಗಲೇ ಆಂಧ್ರದಿಂದ ಹೊಸ ಸುದ್ದಿಯೊಂದು ತೂರಿಬಂದಿದೆ. ಮೊದಲ ಬಾರಿ ಒಂದೇ ಸಿನಿಮಾದಲ್ಲಿ ಸಮಂತಾ ಅಕ್ಕಿನೇನಿ ಮತ್ತು ರಶ್ಮಿಕಾ ಮಂದಣ್ಣ ನಟಿಸಲಿದ್ದಾರಂತೆ!

ಹೌದು, ಹೀಗೊಂದು ಸುದ್ದಿ ಇದೀಗ ಟಾಲಿವುಡ್​ನಲ್ಲಿ ಸದ್ದು ಮಾಡುತ್ತಿದ್ದು, ಅಭಿಮಾನಿಗಳಲ್ಲಿ ಕುತೂಹಲ ಡಬಲ್ ಆಗಿದೆ. ಹಾಗಾದರೆ ಸಿನಿಮಾ ಯಾವುದು? ನಿರ್ದೇಶಕ ಯಾರು? ಸದ್ಯಕ್ಕೆ ಆ ಯಾವ ಮಾಹಿತಿಯೂ ಲಭ್ಯವಾಗಿಲ್ಲ. ಬದಲಿಗೆ ಇಬ್ಬರೂ ಒಟ್ಟಿಗೆ ನಟಿಸಲಿದ್ದಾರೆ, ತೆರೆಮೇಲೆ ಅಕ್ಕತಂಗಿಯರಾಗಿ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

ಟಾಲಿವುಡ್​ನ ಖ್ಯಾತ ನಿರ್ದೇಶಕರೊಬ್ಬರು ಮುಂದೆ ಬಂದು ಈ ಇಬ್ಬರು ಸ್ಟಾರ್ ನಟಿಯರಿಗೆ ಈಗಾಗಲೇ ಒನ್​ಲೈನ್ ಸ್ಟೋರಿ ಹೇಳಿದ್ದು, ಇಬ್ಬರೂ ಮೆಚ್ಚಿಕೊಂಡಿದ್ದಾರಂತೆ. ಪೂರ್ತಿ ಕಥೆ ಸಿದ್ಧಪಡಿಸಿಕೊಂಡ ಬಳಿಕವಷ್ಟೇ ಮುಂದಿನ ನಡೆ ಏನೆಂಬುದನ್ನು ತಿಳಿಸಲಿದ್ದಾರಂತೆ. ಹಾಗಾಗಿ ಸದ್ಯ ನಿರ್ದೇಶಕರು ಚಿತ್ರಕಥೆ ಬರೆಯುವುದರಲ್ಲಿ ತೊಡಗಿಸಿಕೊಂಡಿದ್ದಾರೆ.

ರಿಯಲ್ ಲೈಫ್​ನಲ್ಲಿ ಸಮಂತಾ ಮತ್ತು ರಶ್ಮಿಕಾ ಗೆಳತಿಯರಾಗಿದ್ದು, ಇತ್ತೀಚೆಗಷ್ಟೇ ಸಮಂತಾ ಸಸಿ ನೆಡುವ ಚಾಲೆಂಜ್ ಸ್ವೀಕರಿಸಿ ಅದನ್ನು ರಶ್ಮಿಕಾಗೆ ವರ್ಗಾಯಿಸಿದ್ದರು. ಆ ಚಾಲೆಂಜ್ ಸ್ವೀಕರಿಸಿ ಸಸಿ ನೆಟ್ಟಿದ್ದ ರಶ್ಮಿಕಾ ಬೇರೆ ನಟಿಯರಿಗೂ ಟ್ಯಾಗ್ ಮಾಡಿದ್ದರು.

ಸಿನಿಮಾ ವಿಚಾರಕ್ಕೆ ಬರುವುದಾದರೆ, ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಚಿತ್ರದಲ್ಲಿ ರಶ್ಮಿಕಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನು, ಸಮಂತಾ ಎರಡು ಹೊಸ ಚಿತ್ರಗಳನ್ನು ಒಪ್ಪಿಕೊಂಡಿದ್ದು, ದಸರಾ ಹಬ್ಬದ ನಂತರ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net