

| ಹರ್ಷವರ್ಧನ್ ಬ್ಯಾಡನೂರು
ನಟ ಕಿಚ್ಚ ಸುದೀಪ್ ಕೆಲ ದಿನಗಳಿಂದ ಬೇಡದ ಕಾರಣಗಳಿಂದ ಸುದ್ದಿಯಲ್ಲಿದ್ದರು. ಇದೀಗ, ವಿವಾದಕ್ಕೆ ಬ್ರೇಕ್ ಹಾಕಿ, ಶೂಟಿಂಗ್ ಸೆಟ್ ಸೇರಿಕೊಂಡಿದ್ದಾರೆ. ಕಾಲಿವುಡ್ನ ಖ್ಯಾತ ನಿರ್ಮಾಪಕ ಕಲೈಪುಲಿ ತನು ನಿರ್ಮಿಸುತ್ತಿರುವ, ವಿಜಯನ್ ಆ್ಯಕ್ಷನ್&ಕಟ್ ಹೇಳುತ್ತಿರುವ "ಕಿಚ್ಚ 46' ಚಿತ್ರದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ. ಸದ್ಯ ಮಹಾಬಲಿಪುರಂನಲ್ಲಿ ಚಿತ್ರೀಕರಣ ನಡೆಯುತ್ತಿದ್ದು, ವಿಜಯವಾಣಿ ಜತೆ ತಾವು ತೆಗೆದುಕೊಂಡಿದ್ದ ಬ್ರೇಕ್ ಬಗ್ಗೆ, ಈ ಚಿತ್ರ, ಮುಂದಿನ ಪ್ರಾಜೆಕ್ಟ್ಗಳು ಸೇರಿ ಹಲವು ವಿಷಯಗಳ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ.
ಡಿಸೆಂಬರ್ನಲ್ಲಿ ಕಿಚ್ಚ 46 ರಿಲೀಸ್
ಕಳೆದ ಜುಲೈನಲ್ಲಿ ತಮಿಳು ನಿರ್ಮಾಪಕ ಕಲೈಪುಲಿ ತನು ಕಿಚ್ಚ ಸುದೀಪ್ ಬಳಿ ತಮಿಳು ಸಿನಿಮಾ ಮಾಡಲು ಬಂದರಂತೆ. "ಆದರೆ, "ಕೆಜಿಎ್', "ಕಾಂತಾರ' ಚಿತ್ರಗಳಂತೆ ಕನ್ನಡದಲ್ಲಿ ಸಿನಿಮಾ ಮಾಡಿ ನಂತರ ತಮಿಳು ಸೇರಿ ಪ್ಯಾನ್ ಇಂಡಿಯಾ ಹೋಗೋಣ ಎಂದು ತಿಳಿಸಿದೆ. ನನ್ನ ಮಾತಿಗೆ ಅವರೂ ಒಪ್ಪಿದರು. ಇದೀಗ ಚಿತ್ರೀಕರಣ ನಡೆಯುತ್ತಿದೆ. ಬಹುತೇಕ ಕನ್ನಡದ ಕಲಾವಿದರು, ಛಾಯಾಗ್ರಾಹಕ ಶೇಖರ್ ಚಂದ್ರ, ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಸೇರಿ ಹಲವು ತಂತ್ರಜ್ಞರು ಚಿತ್ರತಂಡದಲ್ಲಿರುವುದು ಮತ್ತೊಂದು ಖುಷಿ' ಎಂದು ಸಂತಸ ಹಂಚಿಕೊಳ್ಳುವ ಸುದೀಪ್, "ಇದೇ ವರ್ಷ ಸಿನಿಮಾ ರಿಲೀಸ್ ಮಾಡಲು ಹಠ ಹಿಡಿದು ಕುಳಿತಿದ್ದೇನೆ' ಎಂದೂ ಹೇಳಿಕೊಳ್ಳುತ್ತಾರೆ. ಮಹಾಬಲಿಪುರಂನಲ್ಲಿ ಇದೇ 29ರವರೆಗೆ ಚಿತ್ರೀಕರಣ ನಡೆಯಲಿದ್ದು, ನಂತರ ಚಿತ್ರತಂಡ ಬ್ರೇಕ್ ಪಡೆಯಲಿದೆ. ಬಳಿಕ ಪಾಂಡಿಚೆರಿಯಲ್ಲಿ ಶೂಟಿಂಗ್ ನಡೆಸುವ ಆಲೋಚನೆ ಚಿತ್ರತಂಡದ್ದು.
ಐದು ಸಿನಿಮಾಗಳು ಲೈನಪ್
"ಕಿಚ್ಚ 46' ಜತೆಗೆ ನಾಲ್ಕು ಕಥೆಗಳನ್ನು ಕಿಚ್ಚ ಸುದೀಪ್ ಓಕೆ ಮಾಡಿದ್ದಾರೆ. "50ನೇ ಚಿತ್ರವೂ ಲೈನಪ್ನಲ್ಲಿದೆ' ಎಂದು ಹೇಳಿಕೊಳ್ಳುವ ಅವರು, ಮತ್ತೆ ನಿರ್ದೇಶಿಸುವ ಬಗ್ಗೆ ಸದ್ಯಕ್ಕೆ ಯೋಚಿಸಿಲ್ಲವಂತೆ. "ನನಗಾಗಿ ಪ್ರೀತಿಯಿಂದ ಕಥೆ ಮಾಡಿಕೊಂಡು ಬರುತ್ತಾರೆ. ಅವರಿಗೆ ಮೊದಲ ಆದ್ಯತೆ. ನನಗಾಗಿ ಕಥೆ ಮಾಡಿಕೊಂಡು ಬರುವವರೆಗೂ ನಾನು ನಟಿಸಲು ಇಷ್ಟಪಡುತ್ತೇನೆ' ಎನ್ನುತ್ತಾರೆ.
ಕರೋನಾ, ಬ್ರೇಕ್ ಮತ್ತು ಕ್ರಿಕೆಟ್
ಕಳೆದ ವರ್ಷ ತೆರೆಕಂಡ "ವಿಕ್ರಾಂತ್ ರೋಣ' ಬಳಿಕ ಸುದೀಪ್ "ಕಬ್ಜ' ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ, ನಾಯಕನಾಗಿ ನಟಿಸಿರಲಿಲ್ಲ. ಕರೋನಾ ಮೂರನೇ ಅಲೆಯ ಸಮಯದಲ್ಲಿ ಅನಾರೋಗ್ಯಕ್ಕೆ ಸಿಲುಕಿದ್ದ ಅವರಿಗೆ ಅದರಿಂದ ಚೇತರಿಸಿಕೊಳ್ಳಲು ಸಾಕಷ್ಟು ಸಮಯವೇ ಹಿಡಿಯಿತು. ಬಳಿಕ ಬ್ರೇಕ್ ತೆಗೆದುಕೊಂಡ ಸುದೀಪ್, ಸಿಸಿಎಲ್ (ಸೆಲೆಬ್ರಿಟಿ ಕ್ರಿಕೆಟ್ ಲೀಗ್), ಕೆಸಿಸಿ (ಕನ್ನಡ ಚಲನಚಿತ್ರ ಕಪ್) ಅಂತ ಕ್ರಿಕೆಟ್ನತ್ತ ಗಮನ ಹರಿಸಿದ್ದರು. "ಮೊದಲಿನಂತೆ ಫಿಟ್ ಆಗಲು ಸುಮಾರು ಒಂಬತ್ತು ತಿಂಗಳ ಸುದೀರ್ ಸಮಯವೇ ಬೇಕಾಯಿತು. ಪ್ರತಿದಿನ ಕೇವಲ ಐದು ನಿಮಿಷ ವರ್ಕೌಟ್ನಿಂದ ಪ್ರಾರಂಭಿಸಿ, ಕ್ರಮೇಣ ಸಮಯ ಹೆಚ್ಚಿಸುತ್ತಾ ಹೋದೆ' ಎಂದು ಹೇಳಿಕೊಳ್ಳುವ ಸುದೀಪ್, ಇದೀಗ ಮೊದಲಿಗಿಂತ ಫಿಟ್ ಆಗಿ ಚಿತ್ರೀಕರಣದಲ್ಲಿ ತೊಡಗಿದ್ದಾರೆ.