ಗೌರವ ಡಾಕ್ಟರೇಟ್​ ಪದವಿಯನ್ನು ತಿರಸ್ಕರಿಸಿದ ನಟ ಕಿಚ್ಚ ಸುದೀಪ್​; ಕೊಟ್ಟ ಕಾರಣ ಹೀಗಿದೆ

Kichcha Sudeep
Published on

ಬೆಂಗಳೂರು: ನಟ, ನಿರ್ದೇಶಕನಾಗಿ ಸಾಕಷ್ಟು ಖ್ಯಾತಿ ಗಳಿಸಿರುವ ಕಿಚ್ಚ ಸುದೀಪ್​ ಅವರು ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿಯೂ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದಾರೆ. ನಟನೆ ಮಾತ್ರವಲ್ಲದೇ ಅವರ ಸಮಾಜಮುಖಿ ಕೆಲಸಗಳು ಆಗಿಂದಾಗೆ ಸದ್ದು ಮಾಡುತ್ತಿರುತ್ತವೆ. ಇವರ ಸಮಾಜಮುಖಿ ಕಾರ್ಯವನ್ನು ಮೆಚ್ಚಿ ತುಮಕೂರು ವಿಶ್ವವಿದ್ಯಾಲಯವು ಡಾಕ್ಟರೇಟ್​ ನೀಡಲು ಮುಂದಾಗಿದ್ದು, ನಟ ಸುದೀಪ್​ ಪದವಿಯನ್ನು ನಿರಾಕರಿಸುವ ಮೂಲಕ ಸರಳತೆ ಮೆರೆದಿದ್ದಾರೆ.

ನಟ ಕಿಚ್ಚ ಸುದೀಪ್​ ಅವರ ಸಾಮಾಜಿಕ ಕಳಕಳಿಯನ್ನು ಮೆಚ್ಚಿ ತುಮಕೂರು ವಿಶ್ವವಿದ್ಯಾಲಯವು ಅವರಿಗೆ ಗೌರವ ಡಾಕ್ಟರೇಟ್​ ನೀಡಿ ಸತ್ಕರಿಸಲು ಮುಂದಾಗಿತ್ತು. ವಿವಿ ಸಿಂಡಿಕೇಟ್​ ಸಭೆಯಲ್ಲಿ ಈ ವಿಚಾರವನ್ನು ಚರ್ಚಿಸಿ ಸುದೀಪ್​ ಅವರ ಗಮನಕ್ಕೂ ತರಲಾಗಿತ್ತು. ಇದಕ್ಕೆ ನಟ ಸುದೀಪ್​ ಪ್ರತಿಕ್ರಿಯಿಸಿರುವ ರೀತಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದು, ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ತುಮಕೂರು ವಿಶ್ವವಿದ್ಯಾಲಯದ ನಿರ್ಧಾರಕ್ಕೆ ಧನ್ಯವಾದ ತಿಳಿಸಿದ ನಟ ಸುದೀಪ್​, ಸಮಾಜದಲ್ಲಿ ತಮಗಿಂತ ಸೇವೆ ಮಾಡಿದ ಹಿರಿಯರಿದ್ದು, ಅವರಿಗೆ ಡಾಕ್ಟರೇಟ್​ ನೀಡಿ ಸತ್ಕರಿಸಿ ಎಂದು ಹೇಳಿ ಪದವಿಯನ್ನು ನಿರಾಕರಿಸುವ ಮೂಲಕ ಸರಳತೆ ಮರೆದಿದ್ದಾರೆ.

ಆಗಸ್ಟ್​ 07ರಂದು ನಡೆಯುವ ತುಮಕೂರು ವಿಶ್ವವಿದ್ಯಾಲಯದ 17ನೇ ಘಟಿಕೋತ್ಸವದಲ್ಲಿ ಮೂವರಿಗೆ ಡಾಕ್ಟರೇಟ್​ ಪದವಿ ಪ್ರಧಾನ ಮಾಡಲಾಗುವುದು. ಜಲಕ್ರೀಡಾ ಸಾಹಸಿಗ ಮತ್ತು‌ ಸಾಮಾಜಿಕ ಕಾರ್ಯಕರ್ತ ಸಿ.ಎಸ್. ನಾಗಾನಂದನ ಸ್ವಾಮಿ, ಕೈಗಾರಿಕೋದ್ಯಮಿ ಎಚ್. ಜಿ‌.ಚಂದ್ರಶೇಖರ್, ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಡಾಕ್ಟರೇಟ್ ಪದವಿ​ ಪ್ರಧಾನ ಮಾಡಲಿದ್ದಾರೆ ಎಂದು ವಿವಿ ಆಡಳಿತ ಮಂಡಳಿ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net