

ದುಬೈ/ಬೆಂಗಳೂರು: ನಟ ಕಿಚ್ಚ ಸುದೀಪ್ "ಮ್ಯಾಕ್ಸ್" ಚಿತ್ರದ ಶೂಟಿಂಗ್ನಿಂದ ಬಿಡುವು ಪಡೆದುಕೊಂಡು ಸದ್ಯ ಸೆಲೆಬ್ರಿಟಿ ಕ್ರಿಕೆಟ್ ಲೀಗ್ (ಸಿಸಿಎಲ್)ನಲ್ಲಿ ಬಿಜಿಯಾಗಿದ್ದಾರೆ. ನಿನ್ನೆ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ನಡೆದ ತಮ್ಮ ತಂಡದ ಮೊದಲ ಪಂದ್ಯದಲ್ಲಿ ಮುಂಬೈ ಹೀರೋಸ್ ವಿರುದ್ಧ ಅದ್ಭುತ ಗೆಲುವು ದಾಖಲಿಸಿರುವ ಖುಷಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡವಿದೆ. ಇದರ ನಡುವೆ ನಟ ಸುದೀಪ್ ಅವರ ವಿಶೇಷ ಹಾಗೂ ಮೋಜಿನ ಕ್ಷಣಗಳ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳ ಮನ ಸೆಳೆದಿದೆ.
ಮೊದಲ ಪಂದ್ಯವನ್ನು 38 ರನ್ಗಳ ಅಂತರದಿಂದ ಕರ್ನಾಟಕ ಬುಲ್ಡೋಜರ್ಸ್ ಗೆದ್ದುಕೊಂಡಿದೆ. ಮೊದಲು ಬ್ಯಾಟ್ ಮಾಡಿ ಕಿಚ್ಚನ ತಂದೆ ಮೊದಲ ಇನ್ನಿಂಗ್ಸನ್ನ 10 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 70 ರನ್ ಕಲೆಹಾಕಿರು. ಗುರಿ ಬೆನ್ನತ್ತಿದ ಮುಂಬೈ ಹೀರೋಸ್ 10 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 76 ರನ್ ಕಲೆಹಾಕುವ ಮೂಲಕ 6 ರನ್ಗಳ ಮುನ್ನಡೆ ಸಾಧಿಸಿತು. ಬಳಿಕ ಎರಡನೇ ಇನ್ನಿಂಗ್ಸ್ ಆರಂಭಿಸಿದ ಕರ್ನಾಟಕ ಬುಲ್ಡೋಜರ್ಸ್ 3 ವಿಕೆಟ್ ನಷ್ಟಕ್ಕೆ 10 ಓವರ್ಗಳಲ್ಲಿ 129 ರನ್ ಕಲೆಹಾಕಿತು. ಗುರಿಬೆನ್ನತ್ತಿದ ಮುಂಬೈ 10 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 85 ರನ್ ಕಲೆಹಾಕಿತು. ಅಂತಿಮವಾಗಿ 38 ರನ್ಗಳ ಅಂತರದಿಂದ ಸೋಲುಂಡಿತು.
ಇಡೀ ಪಂದ್ಯದ ಸಾಕಷ್ಟು ವಿಶೇಷ ಕ್ಷಣಗಳಿಗೆ ಸಾಕ್ಷಿಯಾಯಿತು. ಅದರಲ್ಲೂ ನಟ ಸುದೀಪ್ ಎಲ್ಲ ಫೇವರಿಟ್ ಆದರು. ಅಲ್ಲದೆ, ತಮ್ಮ ಮೋಜಿನ ಆಟದಿಂದಲೇ ಟ್ವಿಟರ್ನಲ್ಲಿ ಟ್ರೆಂಡ್ ಸಹ ಆದರು. ಚಪ್ಪಾಳೆ ತಟ್ಟಿ ಕುಣಿದುಕುಪ್ಪಳಿಸುವ ಮೂಲಕ ತಂಡವನ್ನು ಹುರಿದುಂಬಿಸಿದರು. ಅಲ್ಲದೆ, ಗೆಲುವಿನ ಖುಷಿಯಲ್ಲಿ ಡಗೌಟ್ನಲ್ಲಿ ಕಿರುಚಾಡಿ ಸಂಭ್ರಮಿಸುವ ಮೂಲಕ ಕ್ರಿಕೆಟ್ ಮೇಲಿನ ತಮ್ಮ ಅಭಿಮಾನ ಎಂಥದ್ದು ಎಂದು ತೋರಿಸಿದರು. ಡೈವ್ ಹೊಡೆದ ಫೀಲ್ಡಿಂಗ್ ಮಾಡುವ ಮೂಲಕವೂ ಸುದೀಪ್ ಅಭಿಮಾನಿಗಳ ಗಮನ ಸೆಳೆದರು. ಯುಎಇ ಮೈದಾನದಲ್ಲಿ ಕನ್ನಡದ ಬಾವುಟ ಹಾರಿಸುವ ಮೂಲಕ ಮತ್ತೊಮ್ಮೆ ಕನ್ನಡ ಪ್ರೇಮವನ್ನು ಮೆರೆದರು.
ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಜತೆಗಿನ ಕಿಚ್ಚ ಸುದೀಪ್ ಒಡೆನಾಟ ನಿಮಗೆಲ್ಲ ತಿಳಿದೇ ಇದೆ. ಸಿಸಿಎಲ್ ಉದ್ಘಾಟನೆ ವೇಳೆ ಸಲ್ಮಾನ್ ಖಾನ್ ಮತ್ತು ಕಿಚ್ಚ ಪರಸ್ಪರ ಅಪ್ಪಿಕೊಳ್ಳುವ ಮೂಲಕ ಆತ್ಮೀಯತೆ ಮೆರೆದರು. ಇನ್ನೂ ನಟಿ ಜೆನಿಲಿಯಾ ಡಿಸೋಜ ಹಾಗೂ ರಿತೇಶ್ ದೇಶಮುಖ್ ದಂಪತಿ ಹಾಗೂ ಕಿಚ್ಚ ಸುದೀಪ್ ನಡುವೆ ಒಳ್ಳೆಯ ಬಾಂದವ್ಯ ಇರುವುದು ನಿಮಗೆಲ್ಲರಿಗೂ ತಿಳಿದಿದೆ. ಸಿಸಿಎಲ್ ವೇಳೆಯೂ ಇದು ಸಾಬೀತಾಯಿತು. ಕಿಚ್ಚನ್ನು ನೋಡಿದ ಜನಿಲಿಯಾ ಓಡಿ ಬಂದು ಅಪ್ಪಿಕೊಂಡರು. ಬಳಿಕ ಇಬ್ಬರು ಕ್ಯಾಮೆರಾಗೆ ಪೋಸ್ ನೀಡಿದರು.
ಶಾರ್ಜಾದಲ್ಲಿ ಕನ್ನಡದ ಬಾವುಟ ರಾರಾಜಿಸಿದ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅನಿವಾಸಿ ಕನ್ನಡಿಗರು ಪಂದ್ಯವನ್ನು ಕಣ್ತುಂಬಿಕೊಳ್ಳುವ ಮೂಲಕ ಕಿಚ್ಚನ ತಂಡಕ್ಕೆ ಬೆಂಬಲ ನೀಡಿದರು. ಇದೇ ಸಂದರ್ಭದಲ್ಲಿ ಕಿಚ್ಚ, ಕನ್ನಡಿಗರತ್ತ ಕೈಬೀಸುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದರು. ಹೀಗೆ ಸಾಕಷ್ಟು ಕ್ಷಣಗಳಿಗೆ ಸಿಸಿಎಲ್ ಸಾಕ್ಷಿಯಾಯಿತು.