

ಪಾಟ್ನಾ: ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಷೇಧ ಮಾಡಬೇಕು ಎಂಬ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕೇಂದ್ರ ಗೃಹಸಚಿವ ಅಮಿತ್ ಶಾ(Amit Shah), ಆರ್ಎಸ್ಎಸ್ ನನ್ನನ್ನು ಸೇರಿ ಲಕ್ಷಾಂತರ ಯುವಕರಿಗೆ ಸ್ಪೂರ್ತಿ ನೀಡಿದೆ. ಈ ದೇಶಕ್ಕೆ ಇಬ್ಬರು ಪ್ರಧಾನಿಗಳನ್ನು ಕೊಟ್ಟಿದೆ ಎಂದು ತಿರುಗೇಟು ನೀಡಿದ್ದಾರೆ.
ಪಾಟ್ನಾದಲ್ಲಿ ಎನ್ಡಿಟಿವಿ ಸಂವಾದದಲ್ಲಿ ಮಾತನಾಡಿರುವ ಅವರು, ಸಂಘ ದೇಶಭಕ್ತಿ ಮತ್ತು ಶಿಸ್ತಿನ ಮೌಲ್ಯಗಳನ್ನು ತುಂಬಿದೆ. ಖರ್ಗೆಯವರು ನಿಷೇಧಕ್ಕೆ ಯಾವುದೇ ಕಾರಣ ನೀಡಿಲ್ಲ. ಆದರೆ ಖರ್ಗೆಯವರ ಉದ್ದೇಶ ನಮಗೆ ಅರ್ಥವಾಗಿದೆ. ಅದು ಎಂದಿಗೂ ಈಡೇರುವುದಿಲ್ಲ. ಶತಮಾನೋತ್ಸವವನ್ನು ಆಚರಿಸಿಕೊಳ್ಳುತ್ತಿರುವ ಆರ್ಎಸ್ಎಸ್ ಈ ದೇಶಕ್ಕೆ ಇಬ್ಬರು ಜನಪ್ರಿಯ ಪ್ರಧಾನ ಮಂತ್ರಿಗಳನ್ನು ನೀಡಿದೆ. ಮತ್ತು ಬಹುಶಃ ಅವರಿಬ್ಬರೂ ಅಟಲ್ ಬಿಹಾರಿ ವಾಜಪೇಯಿ ಮತ್ತು ನರೇಂದ್ರ ಮೋದಿ ಈ ದೇಶದ ಅತ್ಯುತ್ತಮ ಪ್ರಧಾನ ಮಂತ್ರಿಗಳಲ್ಲಿ ಪರಿಗಣಿಸಲ್ಪಡಬಹುದು ಎಂದು ತಿಳಿಸಿದ್ದಾರೆ.
ಆರ್ಎಸ್ಎಸ್ ಬಿಜೆಪಿಯ ಸೈದ್ಧಾಂತಿಕ ಪೋಷಕ ಸಂಘಟನೆಯಾಗಿದ್ದು, ಅದರ ಕಾರ್ಯಕರ್ತರು ಪಕ್ಷದ ಚುನಾವಣಾ ಪ್ರಯತ್ನಗಳಲ್ಲಿ ಅನಿವಾರ್ಯರಾಗಿದ್ದಾರೆ. ದೇಶದ ಅಭಿವೃದ್ಧಿಗೆ, ಸಮಾಜಕ್ಕೆ ಸರಿಯಾದ ದಿಕ್ಕನ್ನು ತೋರಿಸಲು ದೇಶದಲ್ಲಿ ಜನರನ್ನು ಒಟ್ಟುಗೂಡಿಸಲು, ಯುವಕರನ್ನು ತಮಗಾಗಿ ಮಾತ್ರವಲ್ಲದೆ ದೇಶಕ್ಕಾಗಿ ಸಿದ್ದಪಡಿಸುವಲ್ಲಿ ದೊಡ್ಡ ಕೊಡುಗೆ ನೀಡಿದೆ ಎಂದಿದ್ದಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದೇನು?
ನ. 31ರಂದು ಏಕತಾ ದಿವಸ್ ಸಂದರ್ಭದಲ್ಲಿ ಮಾತನಾಡಿದ್ದ ಪ್ರಧಾನಿ ಮೋದಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಪರಂಪರೆಯನ್ನು ಕಾಂಗ್ರೆಸ್ ಸರಿಯಾಗಿ ಅನುಸರಿಸುತ್ತಿಲ್ಲ ಎಂದು ಆರೋಪಿಸಿದ್ದರು. ಅದಕ್ಕೆ ಪ್ರತಿಕ್ರಿಯೆಯಾಗಿ ಶುಕ್ರವಾರ ತಿರುಗೇಟು ನೀಡಿದ್ದ ಖರ್ಗೆ, ಭಾರತದ ಮೊದಲ ಗೃಹ ಸಚಿವರಾಗಿದ್ದ ವಲ್ಲಭಭಾಯಿ ಪಟೇಲ್ ಮಂಡಿಸಿದ ಅಭಿಪ್ರಾಯಗಳನ್ನು ಪ್ರಧಾನಿ ಮೋದಿ ಗೌರವಿಸಿದರೆ, ಆರ್ಎಸ್ಎಸ್ ಅನ್ನು ನಿಷೇಧಿಸಬೇಕು ಎಂದು ಹೇಳಿದ್ದರು.
ಇದು ನನ್ನ ವೈಯಕ್ತಿಕ ಅಭಿಪ್ರಾಯ. ಆರ್ಎಸ್ಎಸ್ ಅನ್ನು ಬ್ಯಾನ್ ಮಾಡಬೇಕು. ಸರ್ದಾರ್ ಪಟೇಲರ ತತ್ವಗಳನ್ನು ಅನುಸರಿಸುವುದು ಅಂದ್ರೆ ಅದನ್ನು ಮಾಡಬೇಕು. ದೇಶದಲ್ಲಿ ನಡೆಯುತ್ತಿರುವ ಎಲ್ಲಾ ತಪ್ಪು, ಕಾನೂಣು ಸುವ್ಯವಸ್ಥೆಯ ಸಮಸ್ಯೆಗಳು ಆರ್ಎಸ್ಎಸ್ ಮತ್ತು ಬಿಜೆಪಿಯಿಂದ ಉಂಟಾಗಿವೆ ಎಂದು ಆರೋಪಿಸಿದ್ದರು. (ಏಜೆನ್ಸೀಸ್)