ನವದೆಹಲಿ: ಖಲಿಸ್ತಾನಿ ಉಗ್ರ ( Khalistani Terrorist ) ಗುರುಪತ್ವಂತ್ ಸಿಂಗ್ ಪನ್ನುನ್ನ ಮತ್ತೊಂದು ಬೆದರಿಕೆ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಅಯೋಧ್ಯೆಯ ರಾಮಮಂದಿರದ ಮೇಲೆ ದಾಳಿ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಅಲ್ಲದೆ, ಕೆನಡಾದಲ್ಲಿ ನೆಲೆಸಿರುವ ಭಾರತೀಯರು ಹಿಂದು ದೇವಾಲಯಗಳ ವಿರುದ್ಧದ ದಾಳಿಯಿಂದ ದೂರವಿರುವಂತೆ ಎಚ್ಚರಿಕೆ ನೀಡಿದ್ದಾನೆ.
ಹಿಂಸಾತ್ಮಕ ಹಿಂದುತ್ವ ಸಿದ್ಧಾಂತದ ಜನ್ಮಸ್ಥಳವಾದ ಅಯೋಧ್ಯೆಯ ಅಡಿಪಾಯವನ್ನು ನಾವು ಅಲುಗಾಡಿಸುತ್ತೇವೆ ಎಂದು ಸೋಮವಾರ ಬಿಡುಗಡೆ ಮಾಡಿರುವ ವಿಡಿಯೋದಲ್ಲಿ ಪನ್ನುನ್ ಬೆದರಿಕೆ ಹಾಕಿದ್ದಾನೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.
ನಿಷೇಧಿತ ಸಿಖ್ಸ್ ಫಾರ್ ಜಸ್ಟಿಸ್ ಸಂಘಟನೆಯು ಈ ವೀಡಿಯೊವನ್ನು ಬಿಡುಗಡೆ ಮಾಡಿದೆ. ಜನವರಿಯಲ್ಲಿ ನಡೆದ ರಾಮಮಂದಿರ ಉದ್ಘಾಟನಾ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರದಲ್ಲಿ ಪ್ರಾರ್ಥಿಸುತ್ತಿರುವ ಫೋಟೋಗಳನ್ನು ಸಹ ಬೆದರಿಕೆ ವಿಡಿಯೋದಲ್ಲಿ ಬಳಸಲಾಗಿದೆ. ನವೆಂಬರ್ 16 ಮತ್ತು 17 ರಂದು ದಾಳಿಗಳನ್ನು ನಡೆಸಲಾಗುವುದು ಎಂದು ಪನ್ನುನ್ ಹೇಳಿದ್ದಾನೆ. ವರದಿಗಳ ಪ್ರಕಾರ, ಕೆನಡಾದ ಬ್ರಾಂಪ್ಟನ್ ಪ್ರದೇಶದಲ್ಲಿ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ.
ಕೆಲ ದಿನಗಳ ಹಿಂದಷ್ಟೇ ಮತ್ತೊಂದು ಬೆದರಿಕೆ ಹಾಕಿದ್ದ ಪನ್ನುನ್, ನವೆಂಬರ್ 1 ಮತ್ತು 19ರ ನಡುವೆ ಏರ್ ಇಂಡಿಯಾ ವಿಮಾನಗಳಲ್ಲಿ ಪ್ರಯಾಣಿಸಬೇಡಿ ಎಂದಿದ್ದ. ಭಾರತದಲ್ಲಿ ಸಿಖ್ ವಿರೋಧಿ ದಂಗೆಗಳ 40ನೇ ವಾರ್ಷಿಕೋತ್ಸವದಂದು ಏರ್ ಇಂಡಿಯಾ ವಿಮಾನಗಳ ಮೇಲೆ ದಾಳಿ ನಡೆಯುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದ್ದ. ಈ ಪನ್ನುನ್ ಇಂತಹ ಎಚ್ಚರಿಕೆ ನೀಡಿರುವುದು ಇದೇ ಮೊದಲಲ್ಲ. ಕಳೆದ ನವೆಂಬರ್‌ನಲ್ಲಿಯೂ ಇದೇ ರೀತಿಯ ವಿಡಿಯೋವನ್ನು ಬಿಡುಗಡೆ ಮಾಡಿದ್ದ. ಕಳೆದ ವರ್ಷ ನವೆಂಬರ್ 19 ರಂದು ದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮುಚ್ಚಲಾಗುವುದು ಮತ್ತು ವಿಮಾನ ನಿಲ್ದಾಣದ ಹೆಸರನ್ನೂ ಬದಲಾಯಿಸಲಾಗುವುದು ಎಂದು ಹೇಳಿಕೆ ನೀಡಿದ್ದ.
ಯಾರು ಈ ಪನ್ನುನ್?: ಪಂಜಾಬ್ನ ಅಮೃತಸರದಲ್ಲಿ ಹುಟ್ಟಿದ ಪನ್ನುನ್, 2019ರಲ್ಲಿ ಮೊದಲ ಪ್ರಕರಣ ದಾಖಲಾದಾಗಿನಿಂದ ರಾಷ್ಟ್ರೀಯ ತನಿಖಾ ದಳ (ಎನ್ಐಎ)ದ ಕಣ್ಗಾವಲಿನಲ್ಲಿ ಇದ್ದಾನೆ. ಭಯೋತ್ಪಾದಕ ಕೃತ್ಯಗಳು ಮತ್ತು ಚಟುವಟಿಕೆಗಳನ್ನು ಸಮರ್ಥಿಸುವ ಮತ್ತು ನಿಯೋಜಿಸುವಲ್ಲಿ ಪ್ರಾಥಮಿಕ ಪಾತ್ರವನ್ನು ವಹಿಸಿದ್ದಾನೆ ಮತ್ತು ಪಂಜಾಬ್ ಮತ್ತು ಭಾರತದ ಇತರ ಭಾಗಗಳಲ್ಲಿ ಬೆದರಿಕೆ ತಂತ್ರಗಳ ಮೂಲಕ ಭಯ ಮತ್ತು ಭಯೋತ್ಪಾದನೆಯನ್ನು ಹರಡುತ್ತಿದ್ದಾನೆ ಎಂದು ಆರೋಪಿಸಲಾಗಿದೆ. 2021ರ ಫೆಬ್ರವರಿ 3ರಂದು ಪನ್ನುನ್ ವಿರುದ್ಧ ಎನ್ಐಎ ಜಾಮೀನು ರಹಿತ ಬಂಧನದ ವಾರೆಂಟ್ ಹೊರಡಿಸಿದೆ. ಆತನನ್ನು ಘೋಷಿತ ಅಪರಾಧಿ ಎಂದು ಕಳೆದ ವರ್ಷ ನವೆಂಬರ್ 29ರಂದು ಸರ್ಕಾರ ಘೋಷಣೆ ಮಾಡಿದೆ. ಭಾರತೀಯ ಮೂಲದ ಪನ್ನುನ್, ಯುಎಸ್ ಮತ್ತು ಕೆನಡಾದ ದ್ವಿಪೌರತ್ವವನ್ನು ಹೊಂದಿದ್ದಾನೆ. (ಏಜೆನ್ಸೀಸ್)
ನ. 19ರವರೆಗೆ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಬೇಡಿ: ಖಲಿಸ್ತಾನಿ ಉಗ್ರನ ವಾರ್ನಿಂಗ್ | Khalistani Terrorist
ನೂರಕ್ಕೆ ನೂರರಷ್ಟು ಹಾವಿನ ವಿಷ ತೆಗೆದುಹಾಕುತ್ತೆ ಈ ಗಿಡ! ಇಲ್ಲಿದೆ ನೋಡಿ ಉಪಯುಕ್ತ ಮಾಹಿತಿ… Snake venom