‘ಕೆಜಿಎಫ್ ಚಾಪ್ಟರ್ 2’ ಟೀಸರ್​ ಬಿಡುಗಡೆಗೆ ನಿಗದಿಯಾಯ್ತು ದಿನಾಂಕ!!

KGF-1
Published on

ಬೆಂಗಳೂರು: ಚಂದನವನದ ಬಹುನಿರೀಕ್ಷಿತ ಕೆಜಿಎಫ್​ ಚಾಪ್ಟರ್ 2 ಸಿನಿಮಾ ಎಲ್ಲ ಅಂದುಕೊಂಡಂತೆ ಆಗಿದ್ದರೆ, ಅಕ್ಟೋಬರ್​ 23ರಂದು ಬಿಡುಗಡೆ ಆಗಿರಬೇಕಿತ್ತು. ಕರೊನಾ ನೆಪದಿಂದಾಗಿ ಅದು ಈಡೇರಲಿಲ್ಲ. ಇತ್ತ ಚಿತ್ರತಂಡ ಕೆಲ ತಿಂಗಳಿಂದ ಶೂಟಿಂಗ್​ ಆರಂಭಿಸಿ ಕೊನೇ ಹಂತದ ಚಿತ್ರೀಕರಣಕ್ಕೆ ತಯಾರಿ ನಡೆಸಿದೆ. ಈ ನಡುವೆ ಅಭಿಮಾನಿಗಳ ಕೋರಿಕೆಯನ್ನೂ ಚಿತ್ರತಂಡ ಈಡೇರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಹೌದು, ರಾಕಿಂಗ್​ ಸ್ಟಾರ್ ಯಶ್​ ನಾಯಕತ್ವದ ಕೆಜಿಎಫ್​ ಚಾಪ್ಟರ್​ 2 ಚಿತ್ರದ ಟೀಸರ್​ ಬಿಡುಗಡೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ. ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳು ಟೀಸರ್ ಸಲುವಾಗಿ ಬೇಡಿಕೆ ಇಟ್ಟಿದ್ದರು. ಅದರಂತೆ ಜನವರಿ 8ರ ಯಶ್​ ಹುಟ್ಟುಹಬ್ಬಕ್ಕೆ ಚಿತ್ರತಂಡ ಟೀಸರ್ ಅನ್ನು ಉಡುಗೊರೆ ರೂಪದಲ್ಲಿ ನೀಡಲು ಪ್ಲಾನ್​ ಮಾಡಿಕೊಂಡಿದ್ದಾರೆ.

ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್​ ಗೌಡ ಟೀಸರ್​ ಬಿಡುಗಡೆಯ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಸುಳಿವು ನೀಡಿದ್ದು, ಅಭಿಮಾನಿ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ. ‘ಯಶ್​ ಅವರ ಟೀಸರ್​ ನೋಡಿ ಮೂರು ವರ್ಷ ಆಯ್ತು, ಬೇಡ ಟೀಸರ್ ಬಿಡಿ’ ಎಂದು ಯಶ್ ಅಭಿಮಾನಿ ಕೇಳಿದ ಪ್ರಶ್ನೆಗೆ ಉತ್ತರಿಸಿದ ಕಾರ್ತಿಕ್​ ಗೌಡ, ಯಶ್​ ಬರ್ತ್​​ಡೇಗೆ ನೋಡ್ತಿಯಾ... ಬೇರೆ ರೇಂಜ್​ನಲ್ಲೇ ಇರುತ್ತೆ’ ಎಂದಿದ್ದಾರೆ.

ಇನ್ನು ಕೆಲ ದಿನಗಳ ಬಳಿಕ ಬಾಲಿವುಡ್ ನಟ ಸಂಜಯ್ ದತ್ ಚಿತ್ರತಂಡ ಸೇರಿಕೊಳ್ಳಲಿದ್ದು, ಅವರ ಶೂಟಿಂಗ್​ ಮುಗಿಯುತ್ತಿದ್ದಂತೆ ಸಿನಿಮಾ ಬಿಡುಗಡೆಯ ದಿನಾಂಕವನ್ನು ಘೋಷಣೆ ಮಾಡಿಕೊಳ್ಳುವ ಸಾಧ್ಯತೆ ಇದೆ. ಪ್ರಶಾಂತ್ ನೀಲ್​ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಚಿತ್ರಕ್ಕೆ ಹೊಂಬಾಳೆ ಫಿಲಂಸ್​ ಬಂಡವಾಳ ಹೂಡುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net