ಕೊನೆಗೂ ಅಭಿಮಾನಿಗಳ ಆಸೆ ಈಡೇರಿಸಿದ ಯಶ್!

123
Published on

ಕೆಜಿಎಫ್​ ಚಾಪ್ಟರ್​ 2 ಸಿನಿಮಾ ಬಗ್ಗೆ ಎಲ್ಲೆಡೆ ಕುತೂಹಲ ಇದೆ. ಆದರೆ, ಆಂಧ್ರದಲ್ಲಿ ಮೊದಲ ಚಾಪ್ಟರ್​​ಗೂ ಹೆಚ್ಚಿನ ಬೇಡಿಕೆ ಇದೆ. ಅರೇ, ಈಗಾಗಲೇ ಅಮೆಜಾನ್​ ಪ್ರೈಂನಲ್ಲಿ ತೆಲುಗು ಭಾಷೆಯಲ್ಲಿಯೇ ಸಿನಿಮಾ ಇದೆಯಲ್ಲ ಮತ್ಯಾಕೆ ಬೇಡಿಕೆ? ವಿಷಯ ಇರುವುದೇ ಇಲ್ಲಿ. ಕನ್ನಡದ ಜತೆಗೆ ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಕೆಜಿಎಫ್​ ತೆರೆಕಂಡಿದೆ. ಬಳಿಕ ಟಿವಿಗಳಲ್ಲೂ ಪ್ರಸಾರವಾಗಿದೆ. ಆದರೆ, ತೆಲುಗು ಅವತರಣಿಕೆಯೊಂದನ್ನು ಬಿಟ್ಟು! ಇದೀಗ ಸುದೀರ್ಘ ಎರಡು ವರ್ಷದ ಬಳಿಕ ತೆಲುಗು ಕಿರುತೆರೆಯಲ್ಲಿ ಕೆಜಿಎಫ್​ಗೆ ಬಿಡುಗಡೆ ಭಾಗ್ಯ ಸಿಕ್ಕಿದೆ.

ಟಿವಿ ಹಕ್ಕುಗಳ ವಿಚಾರದಲ್ಲಿ ನಿರ್ಮಾಪಕರ ಮತ್ತು ತೆಲುಗು ವಿತರಕರ ನಡುವಿನ ಮಾತುಕತೆ ಅಂತಿಮ ಆಗಿರಲಿಲ್ಲ. ಒಂದಷ್ಟು ಕಾರಣಕ್ಕೆ ಅದು ಮುಂದೂಡುತ್ತಲೇ ಬಂದಿತ್ತು. ಬೇರೆ ಬೇರೆ ಭಾಷೆಗಳಲ್ಲಿ ಸಿನಿಮಾ ಪ್ರದರ್ಶನವಾದಾಗ, ತೆಲುಗಿನಲ್ಲಿ ಕೆಜಿಎಫ್​ ಸಿನಿಮಾ ಯವಾಗ ಎಂದು ಅಭಿಮಾನಿಗಳು ಜಾಲತಾಣದಲ್ಲಿ ಪ್ರಶ್ನೆಗಳ ಮಹಾಪೂರವನ್ನೇ ಹರಿಸಿದ್ದರು. ಆದರೆ, ಚಿತ್ರತಂಡದಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ. ಕೊನೆಗೆ ಆ ಒಂದು ಘಟನೆಯಿಂದ ಸಿನಿಮಾ ಬಿಡುಗಡೆಗೆ ಅವಕಾಶ ಸಿಕ್ಕಿತು.

ಕಳೆದ ತಿಂಗಳು ಆಂಧ್ರದಲ್ಲಿ ಅಲ್ಲಿನ ಲೋಕಲ್​ ವಾಹಿನಿಯಲ್ಲಿ ಕೆಜಿಎಫ್​ ಸಿನಿಮಾ ಪ್ರಸಾರ ಕಂಡಿತ್ತು. ಇದನ್ನು ಅಭಿಮಾನಿಯೊಬ್ಬ ಸೋಷಿಯಲ್​ ಮೀಡಿಯಾದಲ್ಲಿ ಫೋಟೋ ಸಮೇತ ಶೇರ್​ ಮಾಡಿ, ಚಿತ್ರತಂಡದ ಗಮನಕ್ಕೆ ತಂದಿದ್ದ. ತಂಡದ ಅನುಮತಿ ಪಡೆಯದೇ, ಪ್ರಸಾರ ಮಾಡಿದ್ದಕ್ಕೆ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಹೇಳಿಕೊಂಡಿತ್ತು. ಜತೆಗೆ ಶೀಘ್ರದಲ್ಲಿ ತೆಲುಗುನಲ್ಲಿ ಸಿನಿಮಾ ಪ್ರೀಮಿಯರ್ ಆಗಲಿದೆ ಎಂದೂ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್​ ಗೌಡ ಹೇಳಿದ್ದರು. ಅದರಂತೆ ಸ್ಟಾರ್ ಮಾ ವಾಹಿನಿಯಲ್ಲಿ ಪ್ರೋಮೋ ಬಿತ್ತರವಾಗುತ್ತಿದ್ದು, ಯಾವಾಗ ಪ್ರಸಾರ ಎಂಬುದನ್ನು ಮುಂದಿನ ದಿನಗಳಲ್ಲಿ ಹೇಳಿಕೊಳ್ಳಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net