

ಮೂಲ್ಕಿ: ಹಿಂದೆ ಕೃಷಿ ಕಾರ್ಯಗಳನ್ನು ಕಲಿಯುವ ಹಾಗೂ ಕಲಿಸುವ ಕಾರ್ಯ ಜೀವನ ಪದ್ಧತಿಯಾಗಿತ್ತು. ಕೆಸರುಗದ್ದೆ ಕ್ರೀಡಾಕೂಟದ ಮೂಲಕ ಯುವ ಜನತೆ ಮಣ್ಣಿನ ಕಂಪನ್ನು ಅರಿತು ಗ್ರಾಮದಲ್ಲಿ ಸಂಘಟಿತರಾಗಿ ಅಭಿವೃದ್ಧಿ ಕಂಡುಕೊಳ್ಳುವ ಕಾರ್ಯ ನಡೆಯಬೇಕು ಎಂದು ಶಾಸಕ ಉಮಾನಾಥ ಎ.ಕೋಟ್ಯಾನ್ ಹೇಳಿದರು.
ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನದ ಬಳಿ ಶಿಮಂತೂರು ಯುವಕ ಮಂಡಲದ ಆಶ್ರಯದಲ್ಲಿ ನಾಲ್ಕನೇ ವರ್ಷದ ಕೆಸರ್ಡೊಂಜಿ ದಿನ ಕಾರ್ಯಕ್ರಮ ಉದ್ಘಾಟಿಸಿ ಭಾನುವಾರ ಮಾತನಾಡಿದರು.
ಮೂಲ್ಕಿ ನಪಂ ಅಧ್ಯಕ್ಷ ಸತೀಶ್ ಅಂಚನ್ ದೀಪ ಪ್ರಜ್ವಲನೆ ನೆರವೇರಿಸಿದರು. ಶಿಮಂತೂರು ಶ್ರೀ ಆದಿ ಜನಾರ್ದನ ದೇವಸ್ಥಾನ ಅರ್ಚಕ ಪುರುಷೋತ್ತಮ ಭಟ್ ಆಶೀರ್ವಚನ ನೀಡಿದರು. ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಿಥುನ್ ರೈ ಶುಭ ಹಾರೈಸಿದರು.
ಅತಿಕಾರಿಬೆಟ್ಟು ಗ್ರಾಪಂ ಉಪಾಧ್ಯಕ್ಷ ಮನೋಹರ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ಕೃಷಿಕರಾದ ಭುಜಂಗ ಶೆಟ್ಟಿ ಪರೆಂಕಿಲ, ಕಾಂತಪ್ಪ ಪೂಜಾರಿ ಶೇಡಿಕಟ್ಟ ಹಾಗೂ ಶೈಕ್ಷಣಿಕ ಸಾಧನೆಗೆ ಹರ್ಷಿತಾ ಆರ್.ಶೆಟ್ಟಿ ಅವರನ್ನು ಗೌರವಿಸಲಾಯಿತು. ಸುಧಾಮ ಫೌಂಡೇಶನ್ ಅಧ್ಯಕ್ಷ ಸುನೀಲ್ ಆಳ್ವ, ಉದ್ಯಮಿ ಕಮಲಾಕ್ಷ ಬಡಗುಹಿತ್ಲು, ಶಿಕ್ಷಕಿ ಕಾಮೇಶ್ವರಿ ಭಟ್, ಮಹಿಳಾ ಭಜನಾ ಮಂಡಳಿ ಅಧ್ಯಕ್ಷೆ ರೂಪ ಭಟ್, ಯುವಕ ಮಂಡಲ ಅಧ್ಯಕ್ಷ ದೀಪಕ್ ಮತ್ತಿತರರು ಉಪಸ್ಥಿತರಿದ್ದರು. ಗೋಪಾಲ್ ಶಿಮಂತೂರು ವಂದಿಸಿದರು. ನವೀನ್ ಶೆಟ್ಟಿ ಎಡ್ಮೆಮಾರ್ ಕಾರ್ಯಕ್ರಮ ನಿರೂಪಿಸಿದರು.
ಗ್ರಾಮದಲ್ಲಿ ಅನೇಕ ಸೇವಾ ಕಾರ್ಯಕ್ರಮ ನಡೆಸುತ್ತಿರುವ ಯುವಕ ಮಂಡಲಕ್ಕೆ ಸ್ವಂತ ಕಟ್ಟಡಕ್ಕಾಗಿ ಸರ್ಕಾರಕ್ಕೆ ಶಾಸಕರ ಮೂಲಕ ಮನವಿ ನೀಡಲಾಗಿದೆ. ಶೀಘ್ರದಲ್ಲಿ ಅನುಷ್ಠಾನಗೊಳ್ಳುವ ಭರವಸೆ ಲಭಿಸಿದೆ. ಮನೋಹರ ಕೋಟ್ಯಾನ್ ಉಪಾಧ್ಯಕ್ಷ, ಅತಿಕಾರಿಬೆಟ್ಟು ಗ್ರಾಪಂ