

ಉಳ್ಳಾಲ: ಸರಳತೆ, ಹಿರಿಯ ಯಕ್ಷಗಾನ ಕಲಾವಿದರ ಬದ್ಧತೆ ಮತ್ತು ಪರಿಶ್ರಮದ ಫಲವಾಗಿ ಪ್ರಸ್ತುತ ದಿನಗಳಲ್ಲಿ ಯಕ್ಷಗಾನ ಸಂಪತ್ಭರಿತವಾಗಿದೆ. ತಾಳಮದ್ದಳೆಯೂ ವೈಭವದಿಂದ ನಡೆಯುತ್ತಿದೆ ಎಂದು ಯಕ್ಷಗಾನ ಅರ್ಥಧಾರಿ ರಾಧಾಕೃಷ್ಣ ಕಲ್ಚಾರ್ ಹೇಳಿದರು.
ಮಂಜನಾಡಿ ಬೊಟ್ಟಿಕೆರೆ ಅಂಬುರುಹ ಯಕ್ಷಸದನ ಪ್ರತಿಷ್ಠಾನದಿಂದ, ನಿಟ್ಟೆ ವಿಶ್ವವಿದ್ಯಾಲಯದ ಡಾ.ಕೆ.ಆರ್.ಶೆಟ್ಟಿ ತುಳು ಅಧ್ಯಯನ ಕೇಂದ್ರದಲ್ಲಿ ಶನಿವಾರ ಯಕ್ಷಗಾನ ಸವ್ಯಸಾಚಿ, ಅಭಿನವ ವಾಲ್ಮೀಕಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜ ಸಂಸ್ಮರಣಾರ್ಥ ತೆಂಕುತಿಟ್ಟು ಯಕ್ಷಗಾನ ಕಲಾವಿದ ರೆಂಜಾಳ ರಾಮಕೃಷ್ಣ ರಾವ್ ಅವರಿಗೆ ಅಂಬುರುಹ ಯಕ್ಷಸದನ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಪ್ರಶಸ್ತಿ ಸ್ವೀಕರಿಸಿದ ರಾಮಕೃಷ್ಣ ರಾವ್ ಮಾತನಾಡಿ, ಅಗರಿ ಶ್ರೀನಿವಾಸ ಭಾಗವತರ ಆಶೀರ್ವಾದದೊಂದಿಗೆ ಯಕ್ಷಗಾನದ ಪಯಣ ಆರಂಭಿಸಿದ್ದು ಶೇಣಿ, ಪುಳಿಂಚ, ನರಸಿಂಹ ಭಟ್ ಮೊದಲಾದ ಹಿರಿಯ ಕಲಾವಿದರ ಒಟನಾಟದೊಂದಿಗೆ ಬೆಳೆದಿದ್ದೇನೆ. ಪೂಂಜರ ವಿದ್ವತ್ ಯಕ್ಷಗಾನ ರಂಗಕ್ಕೆ ಮಹತ್ತರ ಕೊಡುಗೆಯಾಗಿತ್ತು ಎಂದರು.
ಕಲಾವಿದ ಸದಾಶಿವ ಆಳ್ವ ತಲಪಾಡಿ ಅಭಿನಂದನಾ ಭಾಷಣ ಮಾಡಿದರು. ಅಂಬುರುಹ ಪ್ರತಿಷ್ಠಾನದ ಅಧ್ಯಕ್ಷ ಶೋಭಾ ಪುರುಷೋತ್ತಮ ಪೂಂಜ ಉಪಸ್ಥಿತರಿದ್ದರು. ಉಪಾಧ್ಯಕ್ಷ ರಾಜಾರಾಮ ಹೊಳ್ಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಚೈತ್ರಾ ಪರೀಕ್ಷಿತ್ ವಂದಿಸಿದರು. ದೀವಿತ್ ಕೆ.ಪೆರಾಡಿ ಕಾರ್ಯಕ್ರಮ ನಿರೂಪಿಸಿದರು.