

ತಿರುವನಂತಪುರಂ: ಕೇರಳದಾದ್ಯಂತ ಭಾರೀ ಮಳೆ ಸುರಿಯುತ್ತಿದ್ದು, ಒಂದು ವಾರದೊಳಗೆ 10,000 ಕ್ಕೂ ಹೆಚ್ಚು ಜನರನ್ನು ಸ್ಥಳಾಂತರಿಸಲಾಗಿದೆ.
ಕೇರಳದಲ್ಲಿ ಮಳೆ ಕಡಿಮೆಯಾದರೂ, ಎರ್ನಾಕುಲಂನ ಕನ್ನಮಲಿ ಮುಂತಾದ ಕಡೆಗಳಲ್ಲಿ ಸಮುದ್ರ ಮಟ್ಟ ಏರುತ್ತಿರುವ ಕಾರಂ ಕರಾವಳಿ ನಿವಾಸಿಗಳ ಜೀವನ ದುಸ್ತರವಾಗಿದೆ. ಇನ್ನು ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಕೆಲವೆಡೆ ರಸ್ತೆ ಸಂಚಾರ ಸ್ಥಗಿತಗೊಂಡಿದೆ.
ಭಾರತೀಯ ಹವಾಮಾನ ಇಲಾಖೆಯ ಇತ್ತೀಚಿನ ಮುನ್ಸೂಚನೆಯ ಪ್ರಕಾರ, ತ್ರಿಶೂರ್, ಪಾಲಕ್ಕಾಡ್, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಭಾನುವಾರ ಲಘು ಮಳೆಯಾಗುವ ಸಾಧ್ಯತೆಯಿದೆ. ಭಾರೀ ಮಳೆಯಿಂದಾಗಿ ಕೇರಳದಾದ್ಯಂತ 10,000 ಜನರು ನಿರಾಶ್ರಿತರಾಗಿದ್ದಾರೆ.
ಜಲಾವೃತಗೊಂಡ ಸ್ಥಳಗಳಲ್ಲಿ ನೀರು ಇಳಿಮುಖವಾಗಿದ್ದರೂ, ಮಳೆಯಲ್ಲಿ ಮುಳುಗಿದ ಮನೆಗಳನ್ನು ಸ್ವಚ್ಛಗೊಳಿಸಲು ಹಲವು ಕುಟುಂಬಗಳು ತುಂಬಾ ಕಷ್ಟಪಡುತ್ತಿದ್ದಾರೆ.
"ಭಾರೀ ಮಳೆಯ ನಂತರ ರಾಜ್ಯಾದ್ಯಂತ ತೆರೆಯಲಾದ 227 ಪರಿಹಾರ ಶಿಬಿರಗಳಲ್ಲಿ 10,399 ಜನರು ಇದ್ದಾರೆ" ಎಂದು ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಅಧಿಕಾರಿ ತಿಳಿಸಿದ್ದಾರೆ. ಅಂಕಿಅಂಶಗಳ ಪ್ರಕಾರ, ಇದುವರೆಗೆ 1,100 ಮನೆಗಳು ಭಾಗಶಃ ಹಾನಿಗೊಳಗಾಗಿದ್ದು ಹಾನಿಯ ಇತರ ವಿವರಗಳು ಇನ್ನೂ ಲಭ್ಯವಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.
ಏತನ್ಮಧ್ಯೆ, ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎಸ್‌ಡಿಎಂಎ) ಶನಿವಾರ ಸಂಜೆಯವರೆಗೆ ದಕ್ಷಿಣ ರಾಜ್ಯದಲ್ಲಿ ಮಳೆ ಸಂಬಂಧಿತ ಘಟನೆಗಳಲ್ಲಿ ಒಟ್ಟು 19 ಜನರು ಸಾವನ್ನಪ್ಪಿದ್ದಾರೆ ಎಂದು ವರದಿ ಮಾಡಿದೆ.
ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯ ತೀವ್ರತೆ ಕಡಿಮೆಯಾದ ಕಾರಣ, ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಏಳು ಜಿಲ್ಲೆಗಳಲ್ಲಿ ಆಲಪ್ಪುಳ, ಎರ್ನಾಕುಲಂ, ಮಲಪ್ಪುರಂ, ಕೋಝಿಕ್ಕೋಡ್, ವಯನಾಡ್, ಕಣ್ಣೂರು ಮತ್ತು ಕಾಸರಗೋಡುಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಿದೆ. ಏತನ್ಮಧ್ಯೆ, ಕೊಚ್ಚಿ, ಕೋಝಿಕ್ಕೋಡ್ ಮತ್ತು ಹೈ-ರೇಂಜ್ ಇಡುಕ್ಕಿಯ ಹಲವು ಪ್ರದೇಶಗಳಲ್ಲಿ ಮುಂಜಾನೆ ಭಾರೀ ಮಳೆಯಾಗಿದೆ. (ಏಜೆನ್ಸೀಸ್)