VIDEO| ಕರೊನಾ ವೈರಸ್​ ಕುರಿತು ಫೇಸ್​ಬುಕ್​ನಲ್ಲಿ ಲೈವ್​ ವಿಡಿಯೋ ಹರಿಬಿಟ್ಟು ಕೆಲಸ ಕಳೆದುಕೊಂಡು ವೈದ್ಯೆ!

Kerala Doctor
Published on

ತಿರುವನಂತಪುರಂ: ಕರೊನಾ ವೈರಸ್​ ವಿರುದ್ಧ ಎಚ್ಚರಿಸಲು ಫೇಸ್​ಬುಕ್​ ಮೂಲಕ ಸೋಮವಾರ ಲೈವ್​ ವಿಡಿಯೋ ಹರಿಬಿಟ್ಟಿದ್ದ ಕೇರಳದ ವೈದ್ಯೆ, ಸಾಮಾಜಿಕ ಕಾರ್ಯಕರ್ತೆ ಹಾಗೂ ಬರಹಗಾರ್ತಿ ತನ್ನ ಕೆಲಸವನ್ನು ಕಳೆದುಕೊಂಡಿದ್ದಾರೆ.

ಡಾ. ಶಿನು ಶ್ಯಾಮಲನ್​, ತ್ರಿಶ್ಶೂರ್​ನ ಖಾಸಗಿ ಆಸ್ಪತ್ರೆಯೊಂದರಲ್ಲಿ ವೈದ್ಯೆಯಾಗಿದ್ದರು. ಕರೊನಾ ಶಂಕಿತ ಪ್ರಕರಣವೊಂದನ್ನು ಆರೋಗ್ಯ ಅಧಿಕಾರಿಗಳಿಗೆ ಎಚ್ಚರಿಸಿದ್ದಕ್ಕೆ ನನ್ನನ್ನು ಗುರಿಯಾಗಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಆದರೆ, ಸರ್ಕಾರ ಹೇಳುವ ಪ್ರಕಾರ ಆಕೆ ಅನವಶ್ಯಕವಾಗಿ ಕರೊನಾ ಕುರಿತು ಭಯದ ವಾತಾವರಣ ಹರಡಿದ್ದಕ್ಕಾಗಿ ಕೆಲಸ ಕಳೆದುಕೊಂಡಿದ್ದಾರೆ ಎಂದು ಸಮರ್ಥಿಸಿಕೊಂಡಿದೆ.

ವಿಡಿಯೋದಲ್ಲಿ ಏನಿದೆ?: ಫೇಸ್​ಬಕ್​ ಲೈವ್​ ವಿಡಿಯೋದಲ್ಲಿ ಮಾತನಾಡಿರುವ ವೈದ್ಯೆ ಶಿನು, ಜನವರಿ ಅಂತ್ಯದಲ್ಲಿ ಕತಾರ್​ನಿಂದ ಬಂದ ದಂಪತಿ ಭಾನುವಾರ ಆಸ್ಪತ್ರೆಗೆ ಬಂದಿದ್ದರು. ಅವರಿಗೆ ಕರೊನಾ ಸೋಂಕು ಇರುವುದು ತಿಳಿಯಿತು. ಕತಾರ್​ನಿಂದ ಬಂದಿದ್ದಾಗಿ ಆರೋಗ್ಯ ಅಧಿಕಾರಿಗಳಿಗೂ ಅವರು ತಿಳಿಸಿರಲಿಲ್ಲ. ತಮ್ಮ ಫೋನ್​ ನಂಬರ್​ ಕೊಡಲು ನಿರಾಕರಿಸಿದರು. ಈ ಬಗ್ಗೆ ನಾನು ಆರೋಗ್ಯ ಅಧಿಕಾರಿಗಳಿಗೆ ಎಚ್ಚರಿಸಿದೆ. ಆದರೆ, ಹೆಚ್ಚಿನ ವಿವರಣೆ ಪಡೆಯಲು ಅಸಡ್ಡೆ ತೋರಿದರು. ದಂಪತಿ ಭಾರತಕ್ಕೆ ಬಂದು ಈಗಾಗಲೇ 35 ದಿನಗಳು ಕಳೆದಿವೆ. ಇದರ ನಡುವೆ ಅವರು ದೆಹಲಿ ಮತ್ತು ಆಗ್ರಾಕ್ಕೂ ಪ್ರಯಾಣ ಮಾಡಿದ್ದಾರೆ. ಹೀಗಾಗಿ ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಹೇಳಿದ್ದರು.

ವೈದ್ಯೆ ಶಿನು ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ತ್ರಿಶ್ಶೂರ್​ನ ಜಿಲ್ಲಾ ವೈದ್ಯಾಧಿಕಾರಿ ಡಾ. ರೀನಾ, ಅನವಶ್ಯಕವಾಗಿ ಕರೊನಾ ಕುರಿತು ಭಯದ ವಾತಾವರಣ ಹರಡಿದ್ದಲ್ಲದೆ, ಹಗಲಿರುಳು ದುಡಿಯುವ ಆರೋಗ್ಯ ಅಧಿಕಾರಿಗಳ ಸ್ಥೈರ್ಯಗೆಡಿಸಿದ್ದಕ್ಕೆ ಶಿನು ವಿರುದ್ಧ ನಾನು ಕಲೆಕ್ಟರ್​ಗೆ ದೂರು ನೀಡಿದ್ದೆ. ನಮಗೆ ನೀಡಿರುವ ಮಾರ್ಗಸೂಚಿ ಪ್ರಕಾರ ಜನವರಿಯಲ್ಲಿ ವಿದೇಶದಿಂದ ಬಂದಂತಹ ವ್ಯಕ್ತಿಗಳಲ್ಲಿ ಯಾವುದೇ ಸೋಂಕುಗಳಿಲ್ಲ. ಆ ಸಮಯದಲ್ಲಿ ಯಾವುದೇ ಪ್ರಕರಣಗಳೂ ವರದಿಯಾಗಿಲ್ಲ. ಹೀಗಾಗಿ ಕತಾರ್​ನಿಂದ ಬಂದಂತಹ ವ್ಯಕ್ತಿಯನ್ನು ಬೇರ್ಪಡಿಸುವ ಅಗತ್ಯವಿಲ್ಲ. ಅನವಶ್ಯಕವಾಗಿ ಭಯ ಹರಡುವುದು ಸರಿಯಲ್ಲ ಎಂದಿದ್ದಾರೆ.

ಈ ಎಲ್ಲ ಬೆಳವಣಿಗೆಯ ನಡುವೆಯೇ ವೈದ್ಯೆ ಶಿನು ಅವರನ್ನು ಕೆಲಸದಿಂದ ಆಸ್ಪತ್ರೆಯ ಮಾಲೀಕ ವಜಾಗೊಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net