ಇಂತಹ ಸಿನಿಮಾ ತಮಿಳಿಗೆ ಬಂದಿದ್ದು… 'ಮಹಾರಾಜ'ನಿಗೆ 'ಮಹಾನಟಿ'ಯ ಸಲಾಂ

Untitled-design-2024-06-14T134113.585
Published on

ತಮಿಳುನಾಡು: ಇಂದು (ಜೂ.14) ತಮಿಳು ಚಿತ್ರರಂಗದ ಸ್ಟಾರ್ ನಟ ವಿಜಯ್ ಸೇತುಪತಿ ಅಭಿನಯದ ಬಹುನಿರೀಕ್ಷಿತ 'ಮಹಾರಾಜ' ಇಂದು ಬಹುತೇಕ ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದ್ದು, ಮೊದಲ ದಿನವೇ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಇನ್ನು ನಟನ 50ನೇ ಸಿನಿಮಾಗೆ ವ್ಯಾಪಕ ಅಭಿನಂದನೆಗಳು ಹರಿದುಬರುತ್ತಿದೆ. ಈ ಮಧ್ಯೆ ಸಾಮಾಜಿಕ ಜಾಲತಾಣದಲ್ಲಿ ಸ್ಟಾರ್​ ನಟಿ ಕೀರ್ತಿ ಸುರೇಶ್​ ಮೆಚ್ಚುಗೆಯ ಮಾತುಗಳು ಮಾತ್ರ ಚಿತ್ರರಸಿಕರ ಗಮನಸೆಳೆಯುತ್ತಿದ್ದು, ಚಿತ್ರವನ್ನು ಚಿತ್ರಮಂದಿರದಲ್ಲಿಯೇ ನೋಡುವಂತೆ ಪ್ರೇರೆಪಿಸುತ್ತಿದೆ.

ಇಂದು ಚಿತ್ರಮಂದಿರಕ್ಕೆ ಹೋಗಿ 'ಮಹಾರಾಜ' ಚಿತ್ರವನ್ನು ವೀಕ್ಷಿಸಿದ 'ಮಹಾನಟಿ', ಸಿನಿಮಾ ನೋಡಿದ ಬಳಿಕ ತನಗಾದ ಅನುಭವವನ್ನು ತಮ್ಮ ಅಭಿಮಾನಿಗಳೊಂದಿಗೆ ವಿವರವಾಗಿ ಹಂಚಿಕೊಂಡಿದ್ದಾರೆ. ಈ ಬಗ್ಗೆ ತನ್ನ ಇನ್​ಸ್ಟಾಗ್ರಾಮ್ ಖಾತೆಯಲ್ಲಿ ಬರೆದುಕೊಂಡ ಕೀರ್ತಿ ಸುರೇಶ್, "ಈಗಷ್ಟೇ ಸಿನಿಮಾವನ್ನು ನೋಡಿಕೊಂಡು ಬಂದೆ. ಅಬ್ಬಾ! ಎಂತಹ ಮಾಸ್ಟರ್​ಪೀಸ್​. ಇಂತಹ ಫಿಲಂ ಅನ್ನು ತಮಿಳು ಚಿತ್ರರಂಗಕ್ಕೆ ಸೇರಿಸಿದ ನಿರ್ದೇಶಕ ನಿಥಿಲನ್ ಸ್ವಾಮಿನಾಥನ್, ನೀವು ಇದರ ನಿಜವಾದ ಸ್ಟಾರ್"​ ಎಂದಿದ್ದಾರೆ.

"ನಿಮ್ಮ 50ನೇ ಸಿನಿಮಾ ಎಂಬುದನ್ನು ಹೇಳಲು ಇದು ಸಖತ್​ ಚಿತ್ರವಾಗಿದೆ ವಿಜಯ್ ಸೇತುಪತಿ ಸರ್. ನಿಜಕ್ಕೂ ಇದೊಂದು ಕಣ್ಣಿಗೆ ಹಬ್ಬವಿದ್ದಂತೆ ಇತ್ತು. ಅನುರಾಗ್ ಕಶ್ಯಪ್​ ಅವರೇ ಎಂತಹ ಪಾತ್ರ ನಿಮ್ಮದು! ಅದ್ಭುತ ಪರ್ಫಾಮೆನ್ಸ್​. ಅಭಿರಾಮಿ ಮೇಡಂ ಬಹಳ ದಿನಗಳ ನಂತರ ಮತ್ತೊಮ್ಮೆ ನಿಮ್ಮನ್ನು ತೆರೆಮೇಲೆ ನೋಡಿದ್ದು ಖಷಿಯಾಯಿತು" ಎಂದು ಇಡೀ ಚಿತ್ರತಂಡಕ್ಕೆ ವಿಶೇಷವಾಗಿ ಮೆಚ್ಚುಗೆ ತಿಳಿಸಿದ್ದಾರೆ.

ಇನ್ನು ನಟಿಯ ಬೆಂಬಲಕ್ಕೆ ಖುದ್ದಾಗಿ ಚಿತ್ರದ ಕಲಾವಿದರೇ ಧನ್ಯವಾದ ತಿಳಿಸಿದ್ದಾರೆ. ನಿಮ್ಮ ಮಾತುಗಳನ್ನು ನೋಡಿದ ಬಳಿಕ ನಮಗೂ ಚಿತ್ರವನ್ನು ನೋಡಬೇಕೆಂದು ಅನಿಸುತ್ತಿದೆ ಎಂದು ಸಿನಿಪ್ರಿಯರು ಕಮೆಂಟ್ ಮೂಲಕ ಅಭಿಪ್ರಾಯಿಸಿದ್ದಾರೆ. ಮೊದಲ ದಿನವೇ 'ಮಹಾರಾಜ'ನಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದೇ ಆದರೂ ಮುಂದಿನ ದಿನಗಳಲ್ಲಿ ಬಾಕ್ಸ್​ ಆಫೀಸ್​ನಲ್ಲಿ ಹೇಗೆ ಕಮಾಲ್ ಮಾಡಲಿದೆ ಎಂಬುದನ್ನು ಸದ್ಯ ಕಾದು ನೋಡಬೇಕಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net