ಅಯ್ಯೋ ದುರ್ವಿಧಿಯೇ...ಇನ್ನೊಂದು ತಿಂಗಳಲ್ಲಿ ಮದ್ವೆಯಾಗಬೇಕಿದ್ದ ಜೋಡಿ ಕರೂರು ಕಾಲ್ತುಳಿತದಲ್ಲಿ ದುರಂತ ಅಂತ್ಯ! Karur Stampede

Karur Stampede
Published on

Karur Stampede : ತಮಿಳಗ ವೆಟ್ರಿ ಕಳಗಂ ಪಕ್ಷದ ಸಂಸ್ಥಾಪಕ ಹಾಗೂ ನಟ ವಿಜಯ್, ನಿನ್ನೆ ಸಂಜೆ (ಸೆ.27) ತಮಿಳುನಾಡಿನ ಕರೂರಿನಲ್ಲಿ ಪ್ರಚಾರ ನಡೆಸಿದರು. ಸಂಜೆ 7 ಗಂಟೆಯ ನಂತರ ಕರೂರಿನ ವೇಲುಚಾಮಿಪುರಂನಲ್ಲಿ ಪ್ರಚಾರ ರ್ಯಾಲಿ ನಡೆಯಿತು. ಸಾಕಷ್ಟು ಜನ ಸೇರಿದ್ದರಿಂದ ಹಠಾತ್ ಕಾಲ್ತುಳಿತ ಸಂಭವಿಸಿ 10 ಮಕ್ಕಳು, 17 ಮಹಿಳೆಯರು ಮತ್ತು 12 ಪುರುಷರು ಸೇರಿದಂತೆ ಒಟ್ಟು 40 ಜನರು ಕಾಲ್ತುಳಿತದಲ್ಲಿ ದುರಂತ ಸಾವಿಗೀಡಾಗಿದ್ದಾರೆ.

ಕೆಲವೇ ದಿನಗಳ ಹಿಂದಷ್ಟೇ ನಿಶ್ಚಿತಾರ್ಥ ಮಾಡಿಕೊಂಡಿದ್ದ ನವಜೋಡಿಯು ಕೂಡ ಇದೇ ಕಾಲ್ತುಳಿತದಲ್ಲಿ ಸಿಲುಕಿ ಸಾವಿಗೀಡಾಗಿದೆ. ಇಬ್ಬರ ಸಾವಿನಿಂದ ಕುಟುಂಬದಲ್ಲಿ ಆಕ್ರಂದನ ಮುಗಿಲು ಮುಟ್ಟಿದೆ. ಅಂದಹಾಗೆ, ಮೃತರನ್ನು ಕರೂರಿನ ಆಕಾಶ್ (24 ವರ್ಷ) ಮತ್ತು ಗೋಕುಲಶ್ರೀ (24 ವರ್ಷ) ಎಂದು ಗುರುತಿಸಲಾಗಿದೆ.

ಕೆಲವೇ ದಿನಗಳ ಹಿಂದೆ ಇಬ್ಬರು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇನ್ನು ಒಂದು ತಿಂಗಳಲ್ಲಿ ಇಬ್ಬರು ಮದುವೆ ಆಗಬೇಕಿತ್ತು. ಅದಕ್ಕಾಗಿ ಎಲ್ಲ ರೀತಿಯ ಸಿದ್ಧತೆಗಳು ನಡೆಯುತ್ತಿದ್ದವು. ಅಷ್ಟರಲ್ಲಿ ಅನಿರೀಕ್ಷಿತ ದುರಂತ ನಡೆದೇ ಹೋಗಿದೆ.

ಆಕಾಶ್ ಮತ್ತು ಗೋಕುಲಶ್ರೀ ತಮ್ಮ ನೆಚ್ಚಿನ ನಾಯಕನ ಭೇಟಿಗೆ ಬಹಳ ಉತ್ಸಾಹದಿಂದ ಹೋಗಿದ್ದರು. ಆದರೆ ವಿಧಿ ಬೇರೆಯದೇ ಯೋಜನೆಯನ್ನು ಹೊಂದಿತ್ತು. ನಿನ್ನೆ ಸಂಭವಿಸಿದ ಕಾಲ್ತುಳಿತದಲ್ಲಿ ಸಿಲುಕಿ ದುರ್ಮರಣಕ್ಕೀಡಾಗಿದ್ದಾರೆ. ಈ ಘಟನೆಯಿಂದ ಅವರಿಬ್ಬರ ಕುಟುಂಬದಲ್ಲಿ ದುಃಖ ತುಂಬಿದೆ. ಮದುವೆ ಸಿದ್ಧತೆಯ ಸಂಭ್ರಮದಲ್ಲಿದ್ದ ಮನೆಗಳಲ್ಲಿ ಇದೀಗ ಸೂತಕದ ಕರಿಛಾಯೆ ಆವರಿಸಿದೆ.

ಇನ್ನು ಈ ಘಟನೆಯ ಬಗ್ಗೆ ನಟ ವಿಜಯ್​ ಪ್ರತಿಕ್ರಿಯೆ ನೀಡಿದ್ದು, ನನ್ನ ಹೃದಯ ಮುರಿದುಹೋಗಿದೆ. ಸದ್ಯ ನಾನು ಅಸಹನೀಯ ಮತ್ತು ಹೇಳಲಾಗದಷ್ಟು ನೋವಿನಲ್ಲಿ ನಾನಿದ್ದೇನೆ ಎಂದು ವಿಜಯ್ ಅವರು ಎಕ್ಸ್ ಮೂಲಕ ಟ್ವೀಟ್ ಮಾಡಿದ್ದಾರೆ.

ಇದರ ನಡುವೆ ಮೃತರಿಗೆ ಟಿವಿಕೆ ತಲಾ 20 ಲಕ್ಷ ರೂಪಾಯಿ ಮತ್ತು ಗಾಯಾಳುಗಳಿಗೆ 2 ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ. ತಮಿಳುನಾಡು ಸರ್ಕಾರ ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರವನ್ನು ಘೋಷಿಸಿದೆ. ಈ ಘಟನೆಯ ಬಗ್ಗೆ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೂಡ ದುಃಖ ವ್ಯಕ್ತಪಡಿಸಿದ್ದಾರೆ. ಗಾಯಾಳುಗಳಿಗೆ ಸಾಧ್ಯವಿರುವ ಎಲ್ಲಾ ವೈದ್ಯಕೀಯ ಸಹಾಯ ನೀಡುವಂತೆ ಆದೇಶಿಸಿದ್ದು, ಕಾಲ್ತುಳಿತ ದುರಂತದ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ.

ಅಂದಹಾಗೆ, ತಮಿಳು ನಾಯಕ ವಿಜಯ್ ತಮ್ಮ ಟಿವಿಕೆ ಪಕ್ಷದ ಪರವಾಗಿ ಆಯೋಜಿಸಿದ್ದ ಸಾರ್ವಜನಿಕ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಆಹಾರ ಅಥವಾ ನೀರಿಲ್ಲದೆ ಸಾವಿರಾರು ಜನರು ಗಂಟೆಗಟ್ಟಲೆ ಬಿಸಿಲಿನಲ್ಲಿ ಕಾಯುತ್ತಿದ್ದರಿಂದ ಉದ್ವಿಗ್ನತೆ ಉಂಟಾಗಿದೆ ಎನ್ನಲಾಗುತ್ತಿದೆ. ಈ ದುರಂತದಲ್ಲಿ 40 ಜನರು ಸಾವಿಗೀಡಾಗಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಕೇಂದ್ರ ಗೃಹ ಸಚಿವಾಲಯವು ಕೂಡ ಈ ಘಟನೆಗೆ ತೀವ್ರವಾಗಿ ಪ್ರತಿಕ್ರಿಯಿಸಿದೆ. ದುರಂತಕ್ಕೆ ಕಾರಣವಾದ ಸಂದರ್ಭಗಳು ಮತ್ತು ರಕ್ಷಣಾ ಕಾರ್ಯಾಚರಣೆಗಳ ಕುರಿತು ಸಂಪೂರ್ಣ ವಿವರಗಳೊಂದಿಗೆ ವರದಿಯನ್ನು ತಕ್ಷಣವೇ ಸಲ್ಲಿಸುವಂತೆ ತಮಿಳುನಾಡು ಸರ್ಕಾರಕ್ಕೆ ಆದೇಶಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net