

ಮುಂಬೈ: ಎರಡೇ ತಿಂಗಳ ಹಿಂದಿನ ಮಾತು. ಕೆಲವೇ ದಿನಗಳ ಅಂತರದಲ್ಲಿ ಮೂರು ಸಿನಿಮಾಗಳಿಂದ ಕಾರಣಾಂತರಗಳಿಂದ ಹೊರಬಂದಿದ್ದರು ನಟ ಕಾರ್ತಿಕ್ ಆರ್ಯನ್. ಕರಣ್ ಜೋಹರ್ ನಿರ್ಮಾಣದ 'ದೋಸ್ತಾನಾ 2', ಶಾರೂಖ್ ಖಾನ್ ನಿರ್ಮಾಣದ 'ಫ್ರೆಡ್ಡಿ' ಮತ್ತು ಆನಂದ್ ಎಲ್ ರೈ ನಿರ್ಮಾಣದ ಒಂದು ಹೊಸ ಚಿತ್ರದಿಂದ ಕಾರ್ತಿಕ್ ಕಾರಣಾಂತರಗಳಿಂದ ಹೊರಬರಬೇಕಾಯಿತು.
ಇನ್ನು ಅವರ ಕೆರಿಯರ್ ಫಿನಿಶ್ ಎಂದೇ ಎಲ್ಲರೂ ಭಾವಿಸಿದ್ದರು. ಏಕೆಂದರೆ, ಈ ಮೂರು ಚಿತ್ರಗಳಿಂದ ಹೊರಬರುವುದಕ್ಕೆ ಮುನ್ನ ಕರಣ್ ಜೋಹರ್ ಜತೆಗೆ ಕಿತ್ತಾಡಿಕೊಂಡಿದ್ದರಂತೆ. ಈ ಕಿತ್ತಾಟದಿಂದ ಕಾರ್ತಿಕ್ ಭಾರೀ ಬೆಲೆ ತೆರಬೇಕಾಗುವ ಸಾಧ್ಯತೆ ಇದೆ ಎಂದು ಬಾಲಿವುಡ್ ಪಂಡಿತರು ಭವಿಷ್ಯ ನುಡಿದಿದ್ದರು. ಅದಕ್ಕೆ ಸರಿಯಾಗಿ, ಕಾರ್ತಿಕ್ ಮೂರು ಚಿತ್ರಗಳನ್ನು ಕಳೆದುಕೊಕಳ್ಳಬೇಕಾಯಿತು. ಈಗ ಕಾರ್ತಿಕ್ ಹೊಸದೊಂದು ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಅದೇ 'ಕ್ಯಾಪ್ಟನ್ ಇಂಡಿಯಾ'.
ಹನ್ಸಲ್ ಮೆಹ್ತಾ ನಿರ್ದೇಶನದ 'ಕ್ಯಾಪ್ಟನ್ ಇಂಡಿಯಾ' ಎಂಬ ಚಿತ್ರವನ್ನು ಕಾರ್ತಿಕ್ ಒಪ್ಪಿಕೊಂಡಿದ್ದು, ಈ ಚಿತ್ರದಲ್ಲಿ ಅವರು ಮೊದಲ ಬಾರಿಗೆ ಪೈಲಟ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಚಿತ್ರವನ್ನು ರಾನ್ನಿ ಸ್ಕ್ರೂವಾಲಾ ಮತ್ತು ಹರ್ಮಾನ್ ಬವೇಜ ಜತೆಯಾಗಿ ನಿರ್ಮಿಸುತ್ತಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.
ಇದನ್ನೂ ಓದಿ: ಚಿತ್ರ ವಿಮರ್ಶೆ: ಇಕ್ಕಟ್ನಲ್ಲಿದೆ ಹಾಸ್ಯದ ಗುಳಿಗೆ…
ಭಾರತದ ಇತಿಹಾಸದಲ್ಲೇ ಒಂದು ಯಶಸ್ವೀ ರಕ್ಷಣಾ ಕಾರ್ಯಾಚರಣೆಯನ್ನಾಧರಿಸಿ ಈ ಚಿತ್ರ ನಿರ್ಮಾಣವಾಗುತ್ತಿದೆ. ಮೊದಲೇ ಹೇಳಿದಂತೆ ಕಾರ್ತಿಕ್ ಈ ಚಿತ್ರದಲ್ಲಿ ಪೈಲಟ್ ಪಾತ್ರ ಮಾಡುತ್ತಿದ್ದು, ರಕ್ಷಣಾ ಕಾರ್ಯಾಚರಣೆಯ ಮುಂದಾಳತ್ವವನ್ನು ಅವರು ವಹಿಸಿಕೊಳ್ಳುತ್ತಿದ್ದಾರಂತೆ. ಈ ಚಿತ್ರವು ಕೆಲವು ನೈಜ ಘಟನೆಗಳನ್ನಾಧರಿಸಿದ ಚಿತ್ರವಾಗಿದ್ದು, ಆದರೆ ಯಾವ ಘಟನೆಗಳು ಎಂಬ ವಿಷಯದ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ಹೊರಬಿಟ್ಟಿಲ್ಲ.