

ಬೆಂಗಳೂರು: ನವರಸ ನಾಯಕ ಜಗ್ಗೇಶ್ ಅವರು ಆತ್ಮಹತ್ಯೆಗೆ ಯತ್ನಿಸಿದ್ದರಂತೆ. ಈ ಬಗ್ಗೆ ಸ್ವತಃ ಜಗ್ಗೇಶ್ ಅವರೇ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ.
ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಸೆಕೆಂಡ್ ಕ್ಲಾಸ್ ಪಡೆದಿದ್ದ ಜಗ್ಗೇಶ್ಗೆ ಅವರ ತಂದೆ ಬೂಟಿನಿಂದ ಹೊಡೆದಿದ್ದರಂತೆ. ಇದರಿಂದ ಬೇಸರಗೊಂಡು ಅವಮಾನ ಸಹಿಸಲಾಗದೆ ಜಗ್ಗೇಶ್ ಅಂದು ಏನೇಲ್ಲ ಮಾಡಿದ್ದರು ಗೊತ್ತಾ? ಇಲ್ಲಿದೇ ಅವರೇ ರಿವೀಲ್ ಮಾಡಿದ ವಿಚಾರ. ಅಂದು ಅನಾಹುತ ಸಂಭವಿಸಿದ್ದರೆ ಇಂದು ಈಶ್ವರ ಇರುತ್ತಿರಲಿಲ್ಲ ಎಂಬ ವಿಚಾರವನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ.
''ಪರೀಕ್ಷೆge ಅರ್ಧಮನಸ್ಸಲ್ಲೇ ಓದಿ ಬರೆದೆ! ಯಾಕೋ ಕನ್ನಡ ಮಾತ್ರ ನನ್ನ ಅಚ್ಚುಮೆಚ್ಚಿನ ವಿಷಯವಾಯಿತು. ಕನ್ನಡ ವ್ಯಾಕರಣ ಸಿಹಿ ತಿನಿಸಂತೆ ಪ್ರೀತಿ. ಬಾಲ್ಯದಿಂದ ಕನ್ನಡಭಾಷ ಪ್ರೀತಿ ಹುಟ್ಟಿದರೆ ಸಾಯುವವರೆಗೂ ಅದು ಅವನ ಹೃದಯದ ನಾಡಿಬಡಿತದಂತೆ ಜತೆಯಲ್ಲೇ ಉಳಿಯುತ್ತದೆ! ಸ್ವಾರ್ಥಕ್ಕೆ ಬಳಕೆಯಾದರೆ ಆತ್ಮದ್ರೋಹವಾಗುತ್ತದೆ''.
"ಈ ಅಂಕ ನೋಡಿದ ಅಪ್ಪ ನಡುರೋಡಲ್ಲಿ ಜನ ನೋಡುವಂತೆ ಬೂಟಿನಲ್ಲಿ ಹೊಡೆದುಬಿಟ್ಟರು. ಅಪಮಾನ ಸಹಿಸಲಾಗದೆ ಆತ್ಮಹತ್ಯಗೆ ಯತ್ನಿಸಿದ್ದೆ. ಆಗ ದಿವಂಗತ ಶ್ರೀರಾಮಪುರದ ಕಿಟ್ಟಿ (ಆ ದಿನಗಳು ಕುಖ್ಯಾತಿ) ನನ್ನ ಬಾಚಿ ಎಳೆದು ರೈಲಿನ ಅನಾಹುತ ತಪ್ಪಿಸಿದ. ಆ ವಿಷಯ ತಿಳಿದು ಅಪ್ಪನಿಗೆ ದುಃಖವಾಗಿ ಮನನೊಂದು ಬಂಧುಮಿತ್ರರ ಮುಂದೆ ಕಣ್ಣೀರು ಇಟ್ಟು ಪಶ್ಚಾತಾಪಪಟ್ಟರು. ಅಂದು ಅನಾಹುತ ಸಂಭವಿಸಿದ್ದರೆ ಇಂದು ಈಶ್ವರ ಜಗ್ಗೇಶನಾಗಿ ಇರುತ್ತಿರಲಿಲ್ಲಾ. ಬದಲಾಗಿ ಸತ್ತ ಕೋಟಿ ಜನರಲ್ಲಿ ಒಬ್ಬನಾಗುತ್ತಿದ್ದೆ" ಎಂದಿರುವ ಜಗ್ಗೇಶ್, "ತಂದೆ-ತಾಯಿ ಮಕ್ಕಳನ್ನ ಬರಿ ಓದಿನ ಯಂತ್ರವಾಗಿ ಬೆಳಸದೆ ಜಗದಪಾಠ ಕಲಿಸುವ ಯತ್ನಮಾಡಿ. ಓದಿದ ಮಕ್ಕಳು ಸರ್ಕಸ್ ಸಿಂಹದಂತೆ ಓದಿನ ಜತೆಗೆ ಜಗದ ಪಾಠ ಕಲಿತವರು ಬೇಟೆಯಾಡುವ ಕಾಡಿನ ಸಿಂಹದಂತೆ'' ಎಂದು ಕಿವಿಮಾತು ಹೇಳಿದ್ದಾರೆ.
"ಇಂದಿನ ಜಗತ್ತಿಗೆ ಮಕ್ಕಳು ಬೇಟೆಯಾಡುವ ಸಿಂಹದಂತೆ ಬಾಳಬೇಕು. ಕಾರಣ ಜಗ ಕಾಡಿನಂತೆ ಆಗಿದೆ, ಮನುಷ್ಯ ಬೇಟೆಯಾಡುವ ಪ್ರಾಣಿಯಂತೆ. ಇಂಥ ಸಮಯದಲ್ಲಿ ಮಕ್ಕಳು ಕಾಡು ಸಿಂಹವಾದರೆ, ಕೆಣಕುವವರು ದೂರ ಉಳಿಯುತ್ತಾರೆ" ಎಂದಿರುವ ಜಗ್ಗೇಶ್, ಎಸ್ಸೆಸ್ಸೆಲ್ಸಿ ಫಲಿತಾಂಶ ಏನೇ ಬರಲಿ ನಿಮ್ಮ ಮಕ್ಕಳನ್ನು ಸಿಂಹದಂತೆ ಸಾಕಿ, ಮಿಕ್ಕಂತೆ ಜಗತ್ತೇ ಮನುಜನಿಗೆ ಜೀವನ ಪಾಠ ಕಲಿಸುತ್ತದೆ'' ಎಂದು ಹೇಳಿದ್ದಾರೆ.