

Bengaluru Stampede: ಬೆಂಗಳೂರಿನ ಚಿನ್ನಸ್ವಾಮಿ ಕ್ರಿಡಾಂಗಣದ ಬಳಿ ನಡೆದ ಕಾಲ್ತುಳಿತದ ಪ್ರಕರಣಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ತೆಗದುಕೊಂಡ ಏಕಪಕ್ಷೀಯ ನಿರ್ಧಾರಗಳೇ ಕಾರಣ ಎಂದು ಕರ್ನಾಟಕ ಸರ್ಕಾರ ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಸರ್ಕಾರ ಸಲ್ಲಿಸಿರುವ ವರದಿಯಲ್ಲಿ, ಆರ್‌ಸಿಬಿ ತಂಡದ ಮ್ಯಾನೇಜ್ಮೆಂಟ್ ಚಿನ್ನಸ್ವಾಮಿ ಕ್ರೀಡಾಂಗಣಕ್ಕೆ ಅಭಿಮಾನಿಗಳನ್ನು ಆಹ್ವಾನಿಸುವ ಮೊದಲು, ನಗರದ ಪೊಲೀಸರೊಂದಿಗೆ ಸರಿಯಾಗಿ ಸಮಾಲೋಚನೆ ನಡೆಸದೆ, ಅವರ ಅನುಮತಿಯನ್ನು ತೆಗೆದುಕೊಳ್ಳದೇ ವಿಜಯೋತ್ಸವ ಮೆರವಣಿಗೆಗೆ ಆಹ್ವಾನ ನೀಡಿತು. ಈ ಅಚಾತುರ್ಯದಿಂದಾಗಿ 11 ಜನರು ಮೃತಪಟ್ಟು, 50ಕ್ಕೂ ಹೆಚ್ಚು ಜನರು ಗಾಯಗೊಂಡರು ಎಂದು ವರದಿಯಲ್ಲಿ ಸರ್ಕಾರ ಉಲ್ಲೇಖಿಸಿದೆ.
ಈ ಪ್ರಕರಣದ ಕುರಿತಾದ ವರದಿಯನ್ನು ಗೌಪ್ಯವಾಗಿಡುವಂತೆ ರಾಜ್ಯ ಸರ್ಕಾರ ನ್ಯಾಯಾಲಯವನ್ನು ಒತ್ತಾಯಿಸಿತ್ತು. ಆದರೆ, ಅಂತಹ ಗೌಪ್ಯತೆಗೆ ಕಾನೂನಿನಲ್ಲಿ ಅವಕಾಶ ಇಲ್ಲ ಎಂದು ನ್ಯಾಯಾಲಯ ಹೇಳಿದೆ.
18 ವರ್ಷಗಳ ದೀರ್ಘ ಕಾಯುವಿಕೆಯ ನಂತರ ಜೂನ್ 3ರಂದು ಆರ್‌ಸಿಬಿ ಚೊಚ್ಚಲ ಬಾರಿ ಐಪಿಎಲ್ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಅಂದೇ ಆರ್‌ಸಿಬಿ ಆಡಳಿತ ಮಂಡಳಿ ಪೊಲೀಸರನ್ನು ಸಂಪರ್ಕಿಸಿ ಸಂಭಾವ್ಯ ವಿಜಯೋತ್ಸವದ ಮೆರವಣಿಗೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿತು. ವಿನಂತಿಯ ಬದಲು ಕೇವಲ ಸೂಚನೆಯ ಸ್ವರೂಪದ್ದಾಗಿತ್ತು ಎಂದು ರಾಜ್ಯ ಸರ್ಕಾರ ತನ್ನ ವರದಿಯಲ್ಲಿ ತಿಳಿಸಿದೆ. ಈ ರೀತಿಯ ಕಾರ್ಯಕ್ರಮಗಳಿಗೆ ಕಾರ್ಯಕ್ರಮಕ್ಕೆ ಕನಿಷ್ಠ ಏಳು ದಿನಗಳ ಮೊದಲೇ ಅನುಮತಿ ಪಡೆಯಬೇಕು ಎಂಬ ನಿಯಮವಿದೆ ಎಂದು ಸರ್ಕಾರ ಹೇಳಿದೆ.
ಇನ್ನು ಸರ್ಕಾರದ ವರದಿಯಲ್ಲಿ ಆರ್‌ಸಿಬಿ ಮ್ಯಾನೇಜ್ಮೆಂಟ್ನದ್ದೇ ತಪ್ಪು ಎಂದು ಹೇಳಲಾಗಿದ್ದು, ಇದೀಗ ಇಡೀ ಪ್ರಕರಣ ಆರ್ಸಿಬಿಯತ್ತ ಬೆರಳು ಮಾಡಿದೆ. ಸರ್ಕಾರದ ಈ ವರದಿಗೆ ಆರ್‌ಸಿಬಿ ಹೇಗೆ ಪ್ರತಿಕ್ರಿಯೆ ನೀಡುತ್ತದೆ ಎಂಬುದನ್ನು ಕಾದು ನೋಡಬೇಕಿದೆ. (ಏಜೆನ್ಸೀಸ್)