ಇಂಗ್ಲೆಂಡ್​ ವಿಕೆಟ್​-ಕೀಪರ್​ ಈಗ ಚಿತ್ರ ಕಲಾವಿದ!: ಕ್ರಿಕೆಟ್​ಗಿಂತ ಪೇಂಟಿಂಗ್​ನಲ್ಲೇ ಹೆಚ್ಚು ಹಣ ಸಂಪಾದನೆ

New Project
Published on

ಲಂಡನ್​: ಇಂಗ್ಲೆಂಡ್​ ತಂಡದ ಮಾಜಿ ವಿಕೆಟ್​ ಕೀಪರ್​-ಬ್ಯಾಟರ್​ ಜಾಕ್​ ರಸೆಲ್​ ಇದೀಗ ಚಿತ್ರ ಕಲಾವಿದರಾಗಿ ವರ್ಣಚಿತ್ರಗಳನ್ನು ಬಿಡಿಸುವುದರಲ್ಲಿ ಬಿಜಿಯಾಗಿದ್ದಾರೆ. ಅಲ್ಲದೆ ಕ್ರಿಕೆಟ್​ಗಿಂತ ತಾನು ಚಿತ್ರ ಕಲಾವಿದನಾಗಿಯೇ ಹೆಚ್ಚು ಹಣ ಸಂಪಾದಿಸಿರುವೆ ಎಂದು 61 ವರ್ಷದ ಜಾಕ್​ ರಸೆಲ್​ ಹೇಳಿಕೊಂಡಿದ್ದಾರೆ.

1987ರಿಂದ 1998ರ ನಡುವೆ ಇಂಗ್ಲೆಂಡ್​ ಪರ 54 ಟೆಸ್ಟ್​ ಮತ್ತು 40 ಏಕದಿನ ಪಂದ್ಯಗಳನ್ನು ಆಡಿರುವ ಜಾಕ್​ ರಸೆಲ್​, 2 ಸಾವಿರಕ್ಕೂ ಅಧಿಕ ರನ್​ ಬಾರಿಸಿದ್ದಾರೆ. ಟೆಸ್ಟ್​ನಲ್ಲಿ 2 ಶತಕಗಳನ್ನು ಸಿಡಿಸಿದ್ದಾರೆ. ಕೀಪರ್​ ಆಗಿ ಒಟ್ಟಾರೆ 200ಕ್ಕೂ ಅಧಿಕ ಬಲಿಗಳನ್ನು ಪಡೆದಿದ್ದಾರೆ. 1996ರಲ್ಲಿ ನಡೆದ ಏಕದಿನ ವಿಶ್ವಕಪ್​ನಲ್ಲಿ ಆಡಿದ್ದರು ಮತ್ತು ಸನ್​ಗ್ಲಾಸ್​ ಧರಿಸಿಯೇ ಕೀಪಿಂಗ್​ ಮಾಡುವ ಮೂಲಕ ಗಮನಸೆಳೆದಿದ್ದರು. ಅವರು ಕೌಂಟಿ ಕ್ರಿಕೆಟ್​ನಿಂದಲೂ ನಿವೃತ್ತಿ ಹೊಂದಿ 20 ವರ್ಷಗಳೇ ಕಳೆದಿವೆ. ಆದರೆ ತನ್ನ ಪೇಂಟಿಂಗ್​ಗಳ ಮೂಲಕ ಅವರು ಈಗಲೂ ಕ್ರಿಕೆಟ್​ ಜತೆಗೆ ಸಂಪರ್ಕ ಹೊಂದಿದ್ದಾರೆ.

ತನ್ನ ಚಿತ್ರಕಲೆಗೆ ಭಾರತದಲ್ಲೂ ಅಭಿಮಾನಿಗಳನ್ನು ಹೊಂದಿರುವ ಜಾಕ್​ ರಸೆಲ್​, ಇತ್ತೀಚೆಗೆ ಅಂತಾರಾಷ್ಟ್ರೀಯ ಕ್ರಿಕೆಟ್​ ಆಡಿದ ಮೊದಲ ಭಾರತೀಯ ರಣಜಿತ್​ಸಿನ್ಹಾಜಿ ಅವರ ಭಾವಚಿತ್ರವೊಂದನ್ನು ಬಿಡಿಸಿದ್ದರು. "ಕಳೆದ 20 ವರ್ಷಗಳನ್ನು ನಾನು ಪೇಂಟಿಂಗ್​ನಲ್ಲೇ ಕಳೆದಿರುವೆ ಮತ್ತು ಸಮಯ ಹೋಗಿದ್ದೇ ಗೊತ್ತಾಗಿಲ್ಲ. ನಾನು ಪ್ರತಿದಿನವೂ ಚಿತ್ರ ಬಿಡಿಸುತ್ತಿರುತ್ತೇನೆ. ಈಗ ಅದೇ ನನ್ನ ಕೆಲಸ. ಒಟ್ಟಾರೆಯಾಗಿ ನಾನು 35-36 ವರ್ಷಗಳಿಂದ ಪೇಟಿಂಗ್​ ಮಾಡುತ್ತಿರುವೆ. ಅಂದರೆ ಕ್ರಿಕೆಟ್​ಗಿಂತ ಹೆಚ್ಚಿನ ಸಮಯವನ್ನು ಇದರಲ್ಲೇ ಕಳೆದಿರುವೆ' ಎಂದು ಜಾಕ್​ ರಸೆಲ್​ ತಿಳಿಸಿದ್ದಾರೆ.

ಜಾಕ್​ ರಸೆಲ್​ ಬಿಡಿಸುವ ಚಿತ್ರಗಳು ದುಬಾರಿ ಬೆಲೆಗೂ ಮಾರಾಟವಾಗುತ್ತವೆ. 2019ರಲ್ಲಿ ಅವರು ಬಿಡಿಸಿದ ಆಶಸ್​ ಸರಣಿಯ ಕೆಲ ಚಿತ್ರಗಳು 28-29 ಲಕ್ಷ ರೂ.ಗಳಿಗೂ ಮಾರಾಟವಾಗಿದ್ದವು. "ಕ್ರಿಕೆಟ್​ ಆಡುವ ದಿನಗಳಲ್ಲಿ ನನಗೆ ಉತ್ತಮ ವೇತನವೇ ಲಭಿಸಿತ್ತು. ಆದರೆ ಅದು ಈಗ ನಾನು ಚಿತ್ರ ಕಲಾವಿದನಾಗಿ ದುಡಿಯುವಷ್ಟು ಅಲ್ಲ. ಕ್ರಿಕೆಟ್​ಗಿಂತ ಹೆಚ್ಚು ಇದರಲ್ಲೇ ಹಣ ಸಂಪಾದಿಸಿರುವೆ. ಆದರೆ ನಾನೀಗ ಹಣಕ್ಕಾಗಿ ಚಿತ್ರ ಬಿಡಿಸುತ್ತಿಲ್ಲ. ಇದು ನನ್ನ ಪ್ರೀತಿ. ನನ್ನ ನೆಚ್ಚಿನ ಎರಡೂ ಕೆಲಸಗಳನ್ನು ನಿರ್ವಹಿಸುವ ಅವಕಾಶ ಲಭಿಸಿದೆ' ಎಂದು ಜಾಕ್​ ರಸೆಲ್​ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net