ನ.18ಕ್ಕೆ ಅಮೇಜಾನ್​ ಪ್ರೈಮ್​ನಲ್ಲಿ ರಿಷಭ್​ ಶೆಟ್ಟಿ ಅಭಿನಯದ 'ಕಾಂತಾರ'?

Kantara 3
Published on

ಬೆಂಗಳೂರು: ರಿಷಭ್​ ಶೆಟ್ಟಿ ಅಭಿನಯದ 'ಕಾಂತಾರ' ಚಿತ್ರವು ಜಗತ್ತಿನಾದ್ಯಂತ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದ್ದು, 300 ಕೋಟಿ ರೂ.ಗಳಿಗೂ ಹೆಚ್ಚು ಕಲೆಕ್ಷನ್​ ಮಾಡಿದೆ. ಈ ಮಧ್ಯೆ, ಚಿತ್ರವು ನ.18ರಂದು ಅಮೇಜಾನ್​ ಪ್ರೈಮ್​ನಲ್ಲಿ ಬಿಡುಗಡೆಯಾಗಲಿದೆ ಎಂಬ ಸುದ್ದಿಯೊಂದು ಸೋಷಿಯಲ್​ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

'ಕಾಂತಾರ' ಚಿತ್ರವು ಸೆ. 30ರಂದು ಬಿಡುಗಡೆಯಾಗಿತ್ತು. ಚಿತ್ರ ಬಿಡುಗಡೆಯಾಗಿದ್ದು ಬರೀ ಕನ್ನಡದಲ್ಲಿ. ಕ್ರಮೇಣ ಚಿತ್ರಕ್ಕೆ ಎಲ್ಲರಿಂದ ಮೆಚ್ಚುಗೆ ಸಿಕ್ಕ ಹಿನ್ನೆಲೆಯಲ್ಲಿ ಬೇರೆ ಭಾಷೆಗಳಿಗೆ ಡಬ್​ ಮಾಡಿ ಬಿಡುಗಡೆ ಮಾಡಲಾಗಿದೆ. ಹಾಗಾಗಿ, 'ಕಾಂತಾರ' ಇಂದು ಬರೀ ಕನ್ನಡ ಚಿತ್ರವಷ್ಟೇ ಅಲ್ಲ, ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿಯಲ್ಲಿ ಡಬ್​ ಆಗುವ ಮೂಲಕ ಪ್ಯಾನ್​ ಇಂಡಿಯಾ ಚಿತ್ರವಾಗಿದೆ. ಎಲ್ಲ ರಾಜ್ಯಗಳಿಗೂ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಗುತ್ತಿರುವುದಷ್ಟೇ ಅಲ್ಲ, ಕಲೆಕ್ಷನ್​ ಸಹ ಜೋರಾಗಿದೆ.

ಕನ್ನಡ ಅವತರಣಿಕೆಯೊಂದೇ ಕಳೆದ ಒಂದು ತಿಂಗಳಲ್ಲಿ 120 ಪ್ಲಸ್​ ಕೋಟಿ ರೂ.ಗಳನ್ನು ಬಾಚಿಕೊಂಡರೆ, ಹಿಂದಿ ಮತ್ತು ತೆಲುಗು ಅವತರಣಿಕೆಯು 60 ಕೋಟಿ ರೂ.ಗಳ ಗಳಿಕೆ ಮಾಡಿದೆ ಎಂದು ಹೇಳಲಾಗುತ್ತಿದೆ. ಬರೀ ಭಾರತವಷ್ಟೇ ಅಲ್ಲ, ಬೇರೆ ದೇಶಗಳಲ್ಲೂ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.

ಹೀಗಿರುವಾಗಲೇ, 'ಕಾಂತಾರ' ಚಿತರವು ನ.18ಕ್ಕೆ ಅಮೇಜಾನ್​ ಪ್ರೈಮ್​ನಲ್ಲಿ ಬರಲಿದೆ ಎಂಬ ಸುದ್ದಿ ಇದೆ. ಅಮೇಜಾನ್​ ಸಂಸ್ಥೆಯು ಚಿತ್ರದ ಡಿಜಿಟಲ್​ ಹಕ್ಕುಗಳನ್ನು ಕೊಂಡುಕೊಂಡಿರುವುದು ನಿಜ. ಆದರೆ, ಚಿತ್ರಮಂದಿರಗಳಲ್ಲಿ ಕಲೆಕ್ಷನ್​ ಚೆನ್ನಾಗಿರುವಾಗ ಓಟಿಟಿಯಲ್ಲೂ ಬಿಡುಗಡೆ ಮಾಡಲಾಗುತ್ತದಾ? ಅಥವಾ ಇನ್ನಷ್ಟು ದಿನ ತಡೆದು ಚಿತ್ರವನ್ನು ಬಿಡುಗಡೆ ಮಾಡಲಾಗುತ್ತದಾ? ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ಆದರೆ, ಸದ್ಯಕ್ಕಂತೂ ಅಮೇಜಾನ್​ ಪ್ರೈಮ್​ನವರಾಗಲೀ, ಚಿತ್ರತಂಡದವರಾಗಲೀ ನ.18ರದು ಚಿತ್ರ ಬಿಡುಗಡೆಯಾಗುತ್ತದೆ ಎಂದು ಎಲ್ಲೂ ಘೋಷಿಸಿಲ್ಲ. ಇನ್ನೂ ತಡವಾಗಿ ಘೋಷಿಸಲಾಗುತ್ತದೋ ಅಥವಾ ಇದು ಬರೀ ಊಹಾಪೋಹವೋ ಎಂಬ ವಿಷಯ ಇನ್ನಷ್ಟೇ ಹೊರಬರಬೇಕಿದೆ.

'ಕಾಂತಾರ' ಚಿತ್ರವನ್ನು ಹೊಂಬಾಳೆ ಫಿಲಂಸ್​ನ ವಿಜಯ್​ ಕುಮಾರ್​ ಕಿರಗಂದೂರು ನಿರ್ಮಿಸಿದ್ದು, ರಿಷಭ್​ ಶೆಟ್ಟಿ ನಿರ್ದೇಶನ ಮಾಡಿದ್ದಾರೆ. ಚಿತ್ರದಲ್ಲಿ ರಿಷಭ್​, ಸಪ್ತಮಿ ಗೌಡ, ಅಚ್ಯುತ್​ ಕುಮಾರ್​, ಕಿಶೋರ್​ ಮುಂತಾದವರು ಅಭಿನಯಿಸಿದ್ದು, ಅಜನೀಶ್​ ಲೋಕನಾಥ್​ ಸಂಗೀತ ಸಂಯೋಜಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net