ಮತ್ತೊಮ್ಮೆ ಇತಿಹಾಸ ಸೃಷ್ಟಿಸಿದ ಕಾಂತಾರ; ಪ್ರತಿಷ್ಠಿತ ಸಿಲ್ವರ್ ಪಿಕಾಕ್ ಪ್ರಶಸ್ತಿ ಮುಡಿಗೇರಿಸಿಕೊಂಡ ಚಿತ್ರ

Kantara
Published on

ನವದೆಹಲಿ: ರಿಷಭ್​ ಶೆಟ್ಟಿ ನಟಿಸಿ, ನಿರ್ದೇಶಿಸುತ್ತಿರುವ ಕಾಂತಾರ ಚಾಪ್ಟರ್​-1 ಮುಹೂರ್ತ ನಿನ್ನೆಯಷ್ಟೇ (ನವೆಂಬರ್ 27) ಅದ್ದೂರಿಯಾಗಿ ನೆರವೇರಿದ್ದು, ಇದೀಗ ಅಭಿಮಾನಿಗಳಿಗೆ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಭಾರತ ಚಿತ್ರರಂಗವೇ ಸ್ಯಾಂಡಲ್​ವುಡ್​ನತ್ತ ತಿರುಗಿ ನೋಡುವಂತೆ ಮಾಡಿದ್ದ ಕಾಂತಾರ ಚಿತ್ರ 54 ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ (IFFI) ವಿಶೇಷ ತೀರ್ಪುಗಾರರ ಪ್ರಶಸ್ತಿಯನ್ನು ಪಡೆದಿದೆ.

ಹೊಂಬಾಳೆ ಸಂಸ್ಥೆ ನಿರ್ಮಾಣದ ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರ ಸಿನಿಮಾ ಇದೀಗ ಗೋವಾದಲ್ಲಿ ನಡೆಯುತ್ತಿರುವ 54ನೇ ಇಂಟರ್‌ನ್ಯಾಷನಲ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪ್ರತಿಷ್ಠಿತ ಸಿಲ್ವರ್ ಪಿಕಾಕ್ ಪ್ರಶಸ್ತಿಯನ್ನು ಪಡೆದುಕೊಂಡಿದೆ. ಈ ಮೂಲಕ ಕನ್ನಡದಲ್ಲಿ ಪ್ರಪ್ರಥಮ ಬಾರಿಗೆ ಈ ಪ್ರಶಸ್ತಿ ಪಡೆದ ಮೊದಲ ಚಿತ್ರ ಎಂಬ ದಾಖಲೆಯನ್ನು ಕಾಂತಾರ ನಿರ್ಮಿಸಿದೆ.

ಈ ಕುರಿತು ಹೊಂಬಾಳೆ ಸಂಸ್ಥೆ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದು, ಗೋವಾ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಮೊಟ್ಟಮೊದಲ ಬಾರಿಗೆ ಸಿಲ್ವರ್ ಪೀಕಾಕ್ ಪ್ರಶಸ್ತಿಯನ್ನು ಗೆಲ್ಲುವ ಮೂಲಕ ಕಾಂತಾರ ಚಿತ್ರರಂಗದ ಇತಿಹಾಸದಲ್ಲೇ ಹೊಸ ಅಧ್ಯಾಯ ಬರೆದಿದೆ ಎಂದು ಸಂಸತ ವ್ಯಕ್ತಪಡಿಸಿದೆ.

70ರ ದಶಕದಲ್ಲಿ ಪ್ರಪ್ರಥಮ ಬಾರಿಗೆ ‘ಒಂದಾನೊಂದು ಕಾಲದಲ್ಲಿ’ ಚಿತ್ರದ ಅಭಿನಯಕ್ಕೆ ನಟ ಶಂಕರ್‌ನಾಗ್ ಅವರಿಗೆ ಈ ಪ್ರಶಸ್ತಿ ಸಿಕ್ಕಿತ್ತು. ಆದರೆ ಸಿನಿಮಾ ವಿಭಾಗದಲ್ಲಿ ಕನ್ನಡ ಸಿನಿಮಾಕ್ಕೆ ಈ ಪ್ರಶಸ್ತಿ ಲಭಿಸುತ್ತಿರುವುದು ಇದೇ ಮೊದಲು ಎಂದು ಹೇಳಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net