VIDEO| ಬಂದೂಕುಧಾರಿಗಳನ್ನು ಪೊರಕೆ ಹಿಡಿದು ಓಡಿಸಿದ ಮಹಿಳೆ

Haryana Firing
Published on

ಚಂಡೀಗಢ: ಗುಂಡಿನ ಸದ್ದು ಕೇಳಿದಾಕ್ಷಣ ಎಂತಹವರಿಗೂ ಒಂದು ಕ್ಷಣಕ್ಕೆ ಮೈ ನಡುಗುವುದು ಸಹಜ ಕೆಲವರು ಶಬ್ದ ಕೇಳುತ್ತಿದ್ದಂತೆ ದೂರ ಓಡಿದರೆ ಇನ್ನು ಕೆಲವರು ಸ್ಥಳದಲ್ಲೇ ಎಚ್ಚರ ತಪ್ಪುತ್ತಾರೆ. ಆದರೆ, ಇಲ್ಲೊಂದು ವಿಚಿತ್ರ ಘಟನೆ ನಡೆದಿದ್ದು, ಮಹಿಳೆಯೊಬ್ಬರು ಪೊರಕೆಯನ್ನೇ ತಮ್ಮ ಆಯುಧವನ್ನಾಗಿಸಿಕೊಂಡು ಬಂದೂಕುಧಾರಿಗಳನ್ನು ಓಡಿಸಿರುವ ಘಟನೆ ನಡೆದಿದೆ.

ಘಟನೆಯು ಹರಿಯಾಣ ಭಿವಾನಿಯಲ್ಲಿ ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಇತ್ತ ಮಹಿಳೆಯ ದೈರ್ಯಕ್ಕೆ ಬೇಷ್​ ಎಂದಿರುವ ನೆಟ್ಟಿಗರು ಆಕೆಯನ್ನು ಹಾಡಿಹೊಗಳಿದ್ದಾರೆ.

ವೈರಲ್​ ವಿಡಿಯೋದಲ್ಲೇನಿದೆ

ಮನೆಯ ಹೊರಗಡೆ ನಿಂತಿದ್ದ ವ್ಯಕ್ತಿಯೋರ್ವನ ಮೇಲೆ ಬೈಕಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಆತನ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸುತ್ತಾರೆ. ಗುಂಡಿನ ದಾಳಿಯ ಸಮಯದಲ್ಲಿ, ಹೊರಗೆ ನಿಂತಿದ್ದ ವ್ಯಕ್ತಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ. ಮನೆಯ ಹೊರಗಡೆ ಏನೋ ಶಬ್ದವಾಗುತ್ತಿರುವುದನ್ನು ಕೇಳಿದ ಮಹಿಳೆ ಕೂಡಲೇ ಹೊರಬರುತ್ತಾರೆ.

ವ್ಯಕ್ತಿಯ ಮೇಲೆ ದಾಳಿಯಾಗುತ್ತಿರುವುದನ್ನು ನೋಡಿದ ಮಹಿಳೆ ಕೂಡಲೇ ಪೊರಕೆಯನ್ನೇ ಆಯುಧವಾಗಿ ಹಿಡಿದುಕೊಂಡು ಬಂದು, ಧೈರ್ಯದಿಂದ ನಾಲ್ವರು ದುಷ್ಕರ್ಮಿಗಳನ್ನು ಅಲ್ಲಿಂದ ಹೆದರಿ ಓಡಿ ಹೋಗುವಂತೆ ಮಾಡಿದ್ದಾಳೆ. ಮಹಿಳೆಯ ಧೈರ್ಯ ಕಂಡು ಗಾಬರಿಗೊಂಡ ಶೂಟರ್‌ಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಅವರಲ್ಲಿ ಒಬ್ಬರು ಮಹಿಳೆಯ ಮೇಲೆ ಗುಂಡು ಹಾರಿಸಲು ಪ್ರಯತ್ನಿಸಿರುವುದನ್ನು ವೈರಲ್ ವಿಡಿಯೋದಲ್ಲಿ ನೋಡಬಹುದಾಗಿದೆ.

ಹಳೇ ವೈಷಮ್ಯ

ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು, ಬೆಳಗ್ಗೆ 7:30ರ ಸುಮಾರಿಗೆ ಭಿವಾನಿಯ ಡಾಬರ್ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರುವಂತೆ, ದಾಳಿಕೋರರು ಹರಿಕಿಶನ್ ಎಂಬಾತನ ಮೇಲೆ ಒಂಬತ್ತು ಭಾರೀ ಗುಂಡು ಹಾರಿಸಿ ಹತ್ಯೆಗೆ ಯತ್ನಿಸಿರುವುದು ಕಂಡು ಬಂದಿದೆ.

ಗಾಯಗೊಂಡಿರುವ ಹರಿಕಿಶನ್​​ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಪಾಯದಿಂದ ಪಾರಾಗಿದ್ದಾರೆ. ಹತ್ಯೆ ಪ್ರಕರಣ ಒಂದರಲ್ಲಿ ಆರೋಪಿಯಾಗಿರುವ ಹರಿಕಿಶನ್​ ಕೆಲ ದಿನಗಳ ಹಿಂದಷ್ಟೇ ಹಾಮೀನಿನ ಮೇಲೆ ಹೊರ ಬಂದಿದ್ದ. ದಾಳಿಯಲ್ಲಿ ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಲಾಗಿದ್ದು, ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಹಿರಿಯ ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net