ಸುಳ್ಯ: ಕಾಂತಮಂಗಲ ಶಾಲಾ ಜಗುಲಿಯಲ್ಲಿ ವ್ಯಕ್ತಿಯೋರ್ವನ ತಲೆಗೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಲಾದ ಪ್ರಕರಣವನ್ನು ಸುಳ್ಯ ಪೊಲೀಸರು ಭೇದಿಸಿದ್ದು ಆರೋಪಿಯನ್ನು ಬಂಧಿಸಿದ್ದಾರೆ.
ಬಸ್ ಸ್ಟಾಂಡ್‌ನಲ್ಲಿ ಪರಿಚಯವಾಗಿ ಬಾರ್‌ಗೆ ಬಂದ
ಎಡಮಂಗಲದ ಉದಯ(45) ಬಂಧಿತ. ರವಿವಾರ ರಾತ್ರಿ ವೇಳೆ ಘಟನೆ ನಡೆದಿದ್ದು ಕೊಲೆಗೀಡಾದ ಕೊಡಗು ವಿರಾಜಪೇಟೆ ತಾಲೂಕಿನ ಹೆಗ್ಗಳ ಗ್ರಾಮದ ವಸಂತ(40) ಹಾಗೂ ಆರೋಪಿ ಉದಯ ಸುಳ್ಯ ಬಸ್ ನಿಲ್ದಾಣದಲ್ಲಿ ಪರಿಚಯವಾಗಿದ್ದರು. ಬಳಿಕ ನಗರದ ಬಾರ್‌ನಲ್ಲಿ ಒಟ್ಟಿಗೆ ಕುಳಿತು ಮದ್ಯ ಸೇವಿಸಿ ಅಲ್ಲಿಂದ ಕಾಂತಮಂಗಲ ಶಾಲಾ ವಠಾರಕ್ಕೆ ಹೋಗಿದ್ದರು. ಕುಡಿದು ಅಮಲಿನಲ್ಲಿದ್ದ ಈರ್ವರೂ ಕ್ಷುಲ್ಲಕ ಕಾರಣಕ್ಕೆ ಜಗಳವಾಡಿ ಕೊನೆಗೆ ಕೊಲೆಯಲ್ಲಿ ಅಂತ್ಯಗೊಂಡಿದೆ.
ಸಂಬಳ ಹಿಡಿದುಕೊಂಡು ಸುಳ್ಯಕ್ಕೆ ಬಂದಿದ್ದ ದುರ್ದೈವಿ
ಕೊಲೆಗೀಡಾದ ವಸಂತ ಕುದುರೆಪಾಯದಿಂದ ವಿವಾಹವಾಗಿದ್ದು, ಕೆಲವು ಸಮಯದಿಂದ ಕಡಬ ತಾಲೂಕಿನ ಕಾಣಿಯೂರು ಎಂಬಲ್ಲಿ ಕೂಲಿ ಕೆಲಸ ಮಾಡುತ್ತಿದ್ದರು. ರಜಾ ದಿನವಾದ ಭಾನುವಾರ ಸಂಬಳ ಪಡೆದು ಸುಳ್ಯಕ್ಕೆ ಬಂದಿದ್ದರು. ವಸಂತ ಕೆಲಸ ಮಾಡುತ್ತಿದ್ದ ಕಾಣಿಯೂರಿನ ಮನೆಯವರು ಕೊಲೆಯಾದ ಘಟನೆಯ ಬಗ್ಗೆ ಮಾಧ್ಯಮದ ಮೂಲಕ ತಿಳಿದು, ಸುಳ್ಯಕ್ಕೆ ಬಂದು ಗುರುತಿಸಿದ್ದರು. ಅಲ್ಲದೆ ಮೃತ ವಸಂತ ಅವರ ಪತ್ನಿಯೂ ಬಂದು ಶವದ ಗುರುತು ಪತ್ತೆ ಹಚ್ಚಿದರು.
24 ಗಂಟೆಯಲ್ಲಿ ಕಾಂತಮಂಗಲ ಕೊಲೆ ಆರೋಪಿ ಪೊಲೀಸ್ ವಶಕ್ಕೆ
ಪ್ರಕರಣದ ತನಿಖೆಗೆ ಪೊಲೀಸ್ ಇಲಾಖೆ ತಂಡವನ್ನು ರಚಿಸಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಸಿ.ಬಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ರಾಜೇಂದ್ರ ಡಿ.ಎಸ್, ಪುತ್ತೂರು ಡಿವೈಎಸ್ಪಿ ಅರುಣ್ ನಾಗೇಗೌಡ ಮಾರ್ಗದರ್ಶನದಲ್ಲಿ ಸುಳ್ಯ ವೃತ್ತ ನಿರೀಕ್ಷಕ ಸತ್ಯನಾರಾಯಣ, ಪುತ್ತೂರು ನಗರ ವೃತ್ತ ನಿರೀಕ್ಷಕ ಸತೀಶ್, ಸುಳ್ಯ ಎಸ್‌ಐ ಮಹೇಶ್, ಸುಬ್ರಹ್ಮಣ್ಯ ಎಸ್‌ಐ ಕಾರ್ತಿಕ್ ಸೇರಿದಂತೆ ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ತನಿಖೆಯಲ್ಲಿ ಸಹಕರಿಸಿದರು.
ಸುಳಿವು ನೀಡಿದ ಸಿಮ್ ಕಾರ್ಡ್
ಕೊಲೆ ನಡೆದ ಸ್ಥಳವಾದ ಕಾಂತಮಂಗಲ ಶಾಲಾ ಜಗುಲಿಯಲ್ಲಿ ಸಿಮ್ ಕಾರ್ಡ್ ಹಾಗೂ ಮದ್ಯದ ಸ್ಯಾಚೆಟ್‌ಗಳು ಪೊಲೀಸರಿಗೆ ದೊರೆತಿದ್ದವು. ಈ ಸಿಮ್ ಕಾರ್ಡ್ ಹಾಗೂ ಮದ್ಯದ ಸ್ಯಾಚೆಟ್ ಎಲ್ಲಿಂದ ಮಾರಾಟವಾಗಿತ್ತು ಎಂಬುದರ ಆಧಾರದಲ್ಲಿ ತನಿಖೆ ಚುರುಕುಗೊಳಿಸಲಾಗಿತ್ತು. ಅಲ್ಲದೆ ಕೊಲೆಯಾದ ವಸಂತ ಹಾಗೂ ಆರೋಪಿ ಉದಯ ಜತೆಯಲ್ಲೇ ಮದ್ಯ ಸೇವಿಸುವ ಸಿಸಿಟಿವಿ ದೃಶ್ಯಗಳೂ ತನಿಖೆಗೆ ಸಹಾಯ ಮಾಡಿತ್ತು. ಅಂತಿಮವಾಗಿ ಘಟನೆ ನಡೆದ ಇಪ್ಪತ್ನಾಲ್ಕು ಗಂಟೆಗಳ ಒಳಗಡೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ.