

ಮಂಗಳೂರು: ಅಬುಧಾಬಿ ಎನ್ಎಂಸಿಯ ಮಾಜಿ ಉದ್ಯೋಗಿ, ಗಾಯಕಿ ಉಡುಪಿ ಮೂಲದ ನಂದನಾ ಶೆಣೈ (54) ಅವರು ಭಾನುವಾರ ಮುಂಜಾನೆ ಉತ್ತರಾಖಂಡದ ಚಾರ್ಧಾಮ್ನಲ್ಲಿ ತೀರ್ಥಯಾತ್ರೆಯಲ್ಲಿದ್ದ ಸಂದರ್ಭ ನಿಧನರಾದರು.
ಇವರು ಪಿ.ವೆಂಕಟೇಶ ಶೆಣೈ ಮತ್ತು ಚಂದ್ರಭಾಗಿ ಶೆಣೈ ಅವರ ದ್ವಿತೀಯ ಪುತ್ರಿ
ಪ್ರವಾಸ ಆಯೋಜಿಸುವ ಸಂಸ್ಥೆಯೊಂದು ಪುಣ್ಯ ಕ್ಷೇತ್ರಗಳ ದರ್ಶನ ಕಾರ್ಯಕ್ರಮ ಆಯೋಜಿಸಿತ್ತು. ನಂದನಾ ಅವರು ತನ್ನ ಗೆಳತಿಯ ಜತೆ ಜೂನ್ 12 ರಂದು ಬೆಂಗಳೂರಿನಿಂದ ನವದೆಹಲಿಗೆ ಪ್ರಯಾಣಿಸಲು ವಿಮಾನ ಏರಿದ್ದರು. ಹರಿದ್ವಾರ, ಕಾಶಿ ಯಾತ್ರೆ , ಪುಣ್ಯಸ್ನಾನ ಮುಗಿಸಿದ್ದ ಅವರು ಜೂನ್ 16 ರಂದು ಚಾರ್ ಧಾಮ್ ನಲ್ಲಿ ಮುಂಜಾನೆ 4 ಗಂಟೆಗೆ ಯಾತ್ರೆ ಮುಂದುವರಿಸಿದ್ದಾರೆ. ನಡುವೆ ಆಹಾರ ಸ್ವೀಕರಿಸುವ ಸಂದರ್ಭ ಅವರ ಆರೋಗ್ಯ ದಲ್ಲಿ ಏರುಪೇರಾಗಿದೆ. ಆಂಬುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜನವಾಗಲಿಲ್ಲ . ಹೃದಯಾಘಾತದಿಂದ ಅವರ ಸಾವು ಸಂಭವಿಸಿದೆ ಎಂದು ಬಳಿಕ ವೈದ್ಯರು ಘೋಷಿಸಿರುವುದಾಗಿ ಕುಟುಂಬ ಮೂಲ ತಿಳಿಸಿದೆ
ನಂದನಾ ಶೆಣೈ ಅವರು ಇಂಡಿಯಾ ಸೋಶಿಯಲ್ ಕಲ್ಚರಲ್ ಸೆಂಟರ್ ಅಬುಧಾಬಿ ಮತ್ತು ಅಬುಧಾಬಿ ಕರ್ನಾಟಕ ಸಂಘದಲ್ಲಿ ಉತ್ತಮ ಗಾಯಕಿಯಾಗಿಯೂ ಜನಪ್ರಿಯತೆ ಗಳಿಸಿದ್ದರು.