

Kamal Haasan : ಕನ್ನಡಿಗರ ಸ್ವಾಭಿಮಾನವನ್ನು ಕೆರಳಿಸುವಂತಹ ಘಟನೆಗಳು ಪದೇಪದೆ ನಡೆಯುತ್ತಿವೆ. ಕೆಲ ದಿನಗಳ ಹಿಂದೆ ಬೆಂಗಳೂರಿನ ಹೋಟೆಲ್ ಒಂದರ ಡಿಜಿಟಲ್ ಬೋರ್ಡ್ನಲ್ಲಿ ಕನ್ನಡಿಗರ ಬಗ್ಗೆ ಕೆಟ್ಟ ಪದವನ್ನು ಬಳಸಲಾಗಿತ್ತು. ಈ ಪ್ರಕರಣ ಮಾಸುವ ಮುನ್ನವೇ ಬಾಲಿವುಡ್ ಗಾಯಕ ಸೋನು ನಿಗಮ್ ಕನ್ನಡಿಗರ ಬಗ್ಗೆ ನಾಲಿ ಹರಿಬಿಟ್ಟಿದ್ದರು. ಈ ಘಟನೆ ಚರ್ಚೆಯಲ್ಲಿರುವಾಗಲೇ ಬೆಂಗಳೂರಿನಲ್ಲಿ ಎಸ್ಬಿಐ ಮ್ಯಾನೇಜರ್ ಒಬ್ಬರು ಕನ್ನಡ ಮಾತನಾಡುವುದಿಲ್ಲ ಎಂದು ದರ್ಪದಿಂದ ಹೇಳುವ ಮೂಲಕ ಕನ್ನಡಿಗರನ್ನು ಕೆರಳಿಸಿದ್ದರು. ಇದೀಗ ಕಾಲಿವುಡ್ ಸೂಪರ್ಸ್ಟಾರ್ ಹಾಗೂ ಸಕಲಕಲಾವಲ್ಲಭ ಎಂದೇ ಖ್ಯಾತಿ ಗಳಿಸಿರುವ ನಟ ಕಮಲ್ ಹಾಸನ್ ಕನ್ನಡಿಗರ ಸ್ವಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ. ಕನ್ನಡ ಹುಟ್ಟಿದ್ದೇ ತಮಿಳಿನಿಂದ ಎನ್ನುವ ಮೂಲಕ ಕನ್ನಡಿಗರಲ್ಲಿ ಆಕ್ರೋಶದ ಕಿಚ್ಚು ಹೊತ್ತಿಸಿದ್ದಾರೆ. ಇಡೀ ಕರ್ನಾಕದಾದ್ಯಂತ ಪ್ರತಿಭಟನೆ ವ್ಯಕ್ತವಾಗುತ್ತಿದ್ದು, ಕ್ಷಮೆ ಕೇಳುವಂತೆ ಆಗ್ರಹಿಸಲಾಗುತ್ತಿದೆ.
ಖ್ಯಾತ ನಿರ್ದೇಶಕ ಮಣಿರತ್ನಂ ನಿರ್ದೇಶನದ ಥಗ್ ಲೈಫ್ ಹೆಸರಿನ ಸಿನಿಮಾದಲ್ಲಿ ಕಮಲ್ ಹಾಸನ್, ಸಿಂಬು, ತ್ರಿಷಾ ಹಾಗೂ ಅಭಿರಾಮಿ ನಟಿಸಿದ್ದಾರೆ. ಈ ಚಿತ್ರದ ಟ್ರೈಲರ್ ಇತ್ತೀಚೆಗಷ್ಟೇ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತು. ಇತ್ತೀಚಗೆ ಸಿನಿಮಾದ ಆಡಿಯೋ ಲಾಂಚ್ ನೆರವೇರಿತು. ಈ ಸಮಾರಂಭಕ್ಕೆ ಅತಿಥಿಯಾಗಿ ನಟ ಶಿವರಾಜ್ಕುಮಾರ್ ಭಾಗವಹಿಸಿದ್ದರು. ಅವರನ್ನು ಉದ್ದೇಶಿಸಿ ಮಾತನಾಡಿದ ಕಮಲ್ ಹಾಸನ್, ಆ ಊರಿನಲ್ಲಿರುವ ನನ್ನ ಕುಟುಂಬ. ಹೀಗಾಗಿಯೇ ಅವರು ಇಲ್ಲಿಗೆ ಬಂದಿದ್ದಾರೆ. ಅದಕ್ಕಾಗಿಯೇ ನಾನು ನನ್ನ ಮಾತು ಆರಂಭಿಸುವುದಕ್ಕೂ ಮುನ್ನವೇ ಉಸಿರೇ, ತಮಿಳೇ ಅಂತ ಆರಂಭಿಸಿದ್ದೆ.. ಅದರಲ್ಲಿ ತಮಿಳಿನಿಂದ ಹುಟ್ಟಿದ್ದೇ ನಿಮ್ಮ ಭಾಷೆ..ಹಾಗಾಗಿ ನೀವು ಕೂಡ ಅದರಲ್ಲಿ ಸೇರಿಕೊಳ್ತೀರಿ ಎಂದು ಹೇಳಿದ್ದರು. ಇದೇ ಹೇಳಿಕೆ ಇದೀಗ ಕನ್ನಡಿಗರಲ್ಲಿ ಆಕ್ರೋಶ ಕಟ್ಟೆ ಹೊಡೆಯುವಂತೆ ಮಾಡಿದೆ.
ಕನ್ನಡದ ಬಗ್ಗೆ ಕಮಲ್ ಹಾಸನ್ ನೀಡಿರುವ ಹೇಳಿಕೆಯನ್ನು ಹಿಂಪಡೆದು, ಕನ್ನಡಿಗರಲ್ಲಿ ಕ್ಷಮೆಯಾಚಿಸಬೇಕೆಂದು ಕನ್ನಡಪರ ಹೋರಾಟಗಾರರು ಪ್ರತಿಭಟನೆ ನಡೆಸುತ್ತಿದ್ದಾರೆ. ಕನ್ನಡಕ್ಕೆ ತನ್ನದೇಯಾದ ಇತಿಹಾಸವಿದೆ. ಅಲ್ಲದೆ, ಕನ್ನಡ ಬಹಳ ಹಳೆಯ ಭಾಷೆಯಾಗಿದ್ದು, ತಮಿಳಿನಿಂದ ಹುಟ್ಟಿಕೊಂಡಿತು ಎಂಬುದನ್ನು ಒಪ್ಪುವುದಿಲ್ಲ. ಕಮಲ್ ಹಾಸನ್ ಅವರು ಇತಿಹಾಸವನ್ನು ತಿಳಿದುಕೊಂಡು ಮಾತನಾಡಲಿ. ಆದಷ್ಟು ಬೇಗ ತಮ್ಮ ಮಾತನ್ನು ಹಿಂಪಡೆದುಕೊಂಡು ಕ್ಷಮೆಯಾಚಿಸಲಿ ಎಂದು ಆಗ್ರಹಿಸಿದ್ದಾರೆ.
ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಜೂನ್ 5ಕ್ಕೆ ಈ ಸಿನಿಮಾ ದೇಶಾದ್ಯಂತ ಬಿಡುಗಡೆಯಾಗಲಿದೆ. ಅದಕ್ಕೂ ಮುಂಚೆಯೇ ಕಮಲ್ ಹಾಸನ್ ಅವರು ಕನ್ನಡಿಗರನ್ನು ಕೆರಳಿಸಿದ್ದು, ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆಗೆ ಸಂಕಷ್ಟ ಎದುರಾಗಿದೆ. ಕನ್ನಡಿಗರ ಕ್ಷಮೆಯನ್ನು ಕೋರದೇ ಹೋದಲ್ಲಿ ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಬಿಡುಗಡೆ ಮಾಡಲು ಅವಕಾಶವ ಕೊಡುವುದಿಲ್ಲ ಎಂದು ಕನ್ನಡಪರ ಹೋರಾಟಗಾರರು ಎಚ್ಚರಿಕೆ ಸಂದೇಶವನ್ನು ರವಾನಿಸಿದ್ದಾರೆ.
ಕಮಲ್ ಹಾಸನ್ ಹೇಳಿಕೆಗೆ ರಾಜ್ಯದ ರಾಜಕೀಯ ನಾಯಕರು ಕೆರಳಿ ಕೆಂಡವಾಗಿದ್ದಾರೆ. ಕಮಲ್ ಹಾಸನ್ ಓರ್ವ ಉತ್ತಮ ನಟ ಎನ್ನುವುದರಲ್ಲಿ ಯಾವುದೇ ಸಂದೇಹವಿಲ್ಲ. ಆದರೆ, ಕನ್ನಡ ಭಾಷೆಯ ಬಗ್ಗೆ ಅವರು ಮಾತನಾಡಿರುವುದು ಖಂಡನೀಯ. ಕನ್ನಡ ಭಾಷೆಗೆ ತನ್ನದೇಯಾದ ಇತಿಹಾಸವಿದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನು ಪ್ರತಿಪಕ್ಷದ ನಾಯಕ ಅಶೋಕ್ ಮಾತನಾಡಿ, ಕಮಲ್ ಹಾಸನ್ ಅವರಿಗೆ ಕನ್ನಡದಲ್ಲೂ ಸಾಕಷ್ಟು ಅವಕಾಶಗಳನ್ನು ನೀಡಿದ್ದೇವೆ. ಅವರು ಈ ರೀತಿ ಮಾತನಾಡಿದ್ದು ಸರಿಯಲ್ಲ ಎಂದು ಹೇಳಿದ್ದಾರೆ.
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ತಮ್ಮ ಎಕ್ಸ್ ಖಾತೆಯಲ್ಲಿ ಸುದೀರ್ಘವಾಗಿ ಬರೆಯುವ ಮೂಲಕ ಕಮಲ್ ಹಾಸನ್ ಅವರನ್ನು ಖಂಡಿಸಿದ್ದಾರೆ. ಮಾತೃಭಾಷೆಯನ್ನು ಪ್ರೀತಿಸಬೇಕು, ಆದರೆ ಅದರ ಹೆಸರಿನಲ್ಲಿ ದುರಭಿಮಾನ ಮೆರೆಯುವುದು ಸಂಸ್ಕೃತಿ ಹೀನ ನಡವಳಿಕೆಯಾಗುತ್ತದೆ. ಅದರಲ್ಲೂ ಕಲಾವಿದರಿಗೆ ಪ್ರತಿಯೊಂದು ಭಾಷೆಯನ್ನೂ ಗೌರವಿಸುವ ಸಂಸ್ಕಾರ ಇರಬೇಕು. ಕನ್ನಡವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳಲ್ಲಿ ನಟಿಸಿರುವ ನಟ ಕಮಲ್ ಹಾಸನ್, ತಮ್ಮ ತಮಿಳು ಭಾಷೆಯನ್ನು ವೈಭವಿಕರಿಸುವ ಮತ್ತಿನಲ್ಲಿ ನಟ ಶಿವರಾಜ್ ಕುಮಾರ್ ಅವರನ್ನೂ ಕುಳ್ಳಿರಿಸಿಕೊಂಡು ಕನ್ನಡವನ್ನು ಅವಮಾನಿಸಿರುವುದು ಉದ್ಧಟತನ ಹಾಗೂ ದುರಹಂಕಾರದ ಪರಮಾವಧಿಯಾಗಿದೆ. ಭಾರತವೂ ಸೇರಿದಂತೆ ವಿಶ್ವದ ಹತ್ತು-ಹಲವು ಕಡೆಗಳಲ್ಲಿ ಕನ್ನಡದ ಹೆಗ್ಗುರುತು ಶತಾಶತಮಾನಗಳಿಂದಲೂ ಪಡಿಮೂಡಿದೆ. ಜಗತ್ತಿನ ಭಾಷೆಗಳಲ್ಲಿ ಕನ್ನಡಕ್ಕೆ ಸರ್ವ ಶ್ರೇಷ್ಠ ಮಾನ್ಯತೆ ಇದೆ ಎಂಬ ಕನಿಷ್ಠ ತಿಳುವಳಿಕೆ ಕಮಲ್ ಹಾಸನ್ ರಂತಹ ಸಂಕುಚಿತ ವ್ಯಕ್ತಿತ್ವವಿರುವ ದುರಾಭಿಮಾನಿ ವ್ಯಕ್ತಿಗಳಿಗೆ ತಿಳಿದಿರಲಿ. ಕನ್ನಡವನ್ನು ಅವಹೇಳನ ಮಾಡುವ ಮುನ್ನ ಕನ್ನಡ ಚಿತ್ರಗಳಲ್ಲೂ ನಟಿಸಿರುವ ಕಮಲ್ ಹಾಸನ್ ಕನ್ನಡ, ಕನ್ನಡಿಗರ ಋಣ ತಮ್ಮ ಮೇಲಿದೆ ಎಂಬ ಔದಾರ್ಯತೆಯನ್ನು ಮರೆತಿದ್ದು ಅವರ ಉಪಕಾರ ಸ್ಮರಣೆಯಿಲ್ಲದ ವ್ಯಕ್ತಿತ್ವವನ್ನು ಅನಾವರಣಗೊಳಿಸಿದೆ. ದಕ್ಷಿಣ ಭಾರತದಲ್ಲಿ ಸಾಮರಸ್ಯತೆಯನ್ನು ಬೆಸೆಯಬೇಕಾದ ಕಮಲ್ ಹಾಸನ್ ಅವರು ಕಳೆದ ಕೆಲವು ವರ್ಷಗಳಿಂದ ನಿರಂತರವಾಗಿ ಹಿಂದೂ ಧರ್ಮವನ್ನು ಅವಹೇಳನ ಮಾಡುತ್ತಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುತ್ತಿದ್ದರು. ಇದೀಗ ಆರೂವರೆ ಕೋಟಿ ಕನ್ನಡಿಗರ ಸ್ವಾಭಿಮಾನಕ್ಕೆ ಕೊಳ್ಳಿಯಿಟ್ಟು ಕನ್ನಡವನ್ನು ಅಪಮಾನಿಸಿದ್ದಾರೆ. ಈ ಕೂಡಲೇ ಕಮಲ್ ಹಾಸನ್ ಅವರು ಬೇಷರತ್ ಕನ್ನಡಿಗರ ಕ್ಷಮೆ ಕೇಳಬೇಕು. ಯಾವ ಭಾಷೆಯಿಂದ ಯಾವ ಭಾಷೆ ಹುಟ್ಟಿತು ಎಂಬುದನ್ನು ವ್ಯಾಖ್ಯಾನಿಸಲು ಕಮಲ್ ಹಾಸನ್ ಇತಿಹಾಸ ತಜ್ಞರೇನೂ ಅಲ್ಲ. ಆದರೆ ಎರಡೂವರೆ ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಇರುವ ಕನ್ನಡ ಭಾಷೆ ಭಾರತದ ಭೂಪಟದಲ್ಲಿ ಸಮೃದ್ಧತೆಯನ್ನು ಸಂಕೇತಿಸುತ್ತದೆ, ಸೌಹಾರ್ದತೆಯನ್ನು ಪ್ರತಿನಿಧಿಸುತ್ತಿದೆ. ಕನ್ನಡಿಗರು ಭಾಷಾ ದ್ವೇಷಿಗಳಲ್ಲ, ಆದರೆ ಕನ್ನಡ ನಾಡು, ನುಡಿ, ಜನ, ಜಲ, ವಿಚಾರಗಳು ಬಂದಾಗ ಸ್ವಾಭಿಮಾನವನ್ನು ಎಂದಿಗೂ ಬಲಿ ಕೊಟ್ಟಿಲ್ಲ ಎಂಬ ಸತ್ಯ ವಿವೇಕ ಸುಟ್ಟುಕೊಂಡವರಂತೆ ಮಾತನಾಡಿರುವ ಕಮಲ್ ಹಾಸನ್ ಅವರಿಗೆ ನೆನಪಿರಲಿ ಎಂದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲೂ ಕಮಲ್ ಹಾಸನ್ಗೆ ಕನ್ನಡಿಗರು ಸಖತ್ ಕೌಂಟರ್ ಕೊಡುತ್ತಿದ್ದಾರೆ. ಕಮಲ್ ಹಾಸನ್ ಅವರೇ ನೀವು ತಪ್ಪಾಗಿ ಭಾವಿಸಿರಬೇಕು. ಸಾಧ್ಯವಾದರೆ, ತಟಸ್ಥ ಭಾಷಾ ಅಧ್ಯಯನ ತಜ್ಞರ ಬಳಿ ಹೋಗಿ ದಯವಿಟ್ಟು ಕನ್ನಡ ತಮಿಳಿನಿಂದ ಹುಟ್ಟಿಲ್ಲ ಎಂಬುದನ್ನು ತಿಳಿಯಿರಿ. ಕನ್ನಡ ಮತ್ತು ತಮಿಳು ಒಂದೇ ಮೂಲವನ್ನು ಹೊಂದಿವೆ. ಅವು ಒಂದರಿಂದ ಇನ್ನೊಂದು ಹುಟ್ಟುವ ಬದಲು ಏಕಕಾಲದಲ್ಲಿ ಸ್ವತಂತ್ರ ಭಾಷೆಗಳಾಗಿ ಬೆಳೆದಿವೆ ಎಂದು ನೆಟ್ಟಿಗರೊಬ್ಬರು ತಿರುಗೇಟು ನೀಡಿದ್ದಾರೆ. ತಮ್ಮ ತಮಿಳು ಭಾಷೆಯನ್ನು ಹೊಗಳುವ ಭರದಲ್ಲಿ ಇನ್ನೊಂದು ಭಾಷೆಗೆ ಅವಮಾನ ಮಾಡಬೇಡಿ. ಎಲ್ಲರನ್ನು ಗೌರವಿಸುವವನೇ ನಿಜವಾದ ನಾಯಕ, ನಿಮ್ಮ ಚಿತ್ರದ ಪ್ರಚಾರದ ತೆವಲಿಗೆ ಇನ್ನೊಂದು ಭಾಷೆಯನ್ನು ಅವಮಾನಿಸಬೇಡಿ ಎಂದೆಲ್ಲ ಕನ್ನಡಿಗರು ನಟ ಕಮಲ್ ಹಾಸನ್ ಎಕ್ಸ್ ಖಾತೆಯನ್ನು ಟ್ಯಾಗ್ ಮಾಡಿ ತಿರುಗೇಟು ನೀಡುತ್ತಿದ್ದಾರೆ.
ಕನ್ನಡದ ಬಗ್ಗೆ ತಾವು ನೀಡಿರುವ ಹೇಳಿಕೆ ದೊಡ್ಡ ವಿವಾದ ಸ್ವರೂಪ ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಕಮಲ್ ಹಾಸನ್ ಕ್ಷಮೆ ಕೇಳ್ತಾರಾ ಅನ್ನೋ ಪ್ರಶ್ನೆ ಮೂಡಿದೆ. ತಮ್ಮ ತಪ್ಪಿನ ಅರಿವಾಗಿ ಕಮಲ್ ಹಾಸನ್ ಕ್ಷಮೆ ಕೇಳಿದರೂ ಕೇಳಬಹುದು ಅಥವಾ ಥಗ್ ಲೈಫ್ ಚಿತ್ರಕ್ಕೆ ಏನಾದರೂ ಸಂಕಷ್ಟ ಎದುರಾಗಬಹುದು ಅನ್ನೋ ಕಾರಣಕ್ಕೂ ಕ್ಷಮೆಯಾಚಿಸಬಹುದು. ಒಟ್ಟಿನಲ್ಲಿ ಕ್ಷಮೆಯಾಚಿಸಲೇಬೇಕಿದೆ. ಇಲ್ಲವಾದಲ್ಲಿ ಕನ್ನಡಿಗರ ಮನದಲ್ಲಿ ಕಮಲ್ ಹಾಸನ್ ಒಂದು ಕಪ್ಪು ಚುಕ್ಕೆಯಾಗಿ ಉಳಿದುಬಿಡುತ್ತಾರೆ. ಕ್ಷಮೆ ಕೇಳ್ತಾರಾ? ಇಲ್ಲವಾ? ಎಂದು ಕಾದು ನೋಡಬೇಕಿದೆ.