ಸ್ಪಿರಿಟ್​ ಸಿನಿಮಾ ವಿವಾದ: ಸಂದೀಪ್​ ರೆಡ್ಡಿ ವಂಗಾಗೆ ಖಡಕ್​ ತಿರುಗೇಟು ಕೊಟ್ಟ ದೀಪಿಕಾ ಪಡುಕೋಣೆ! Deepika Padukone

Deepika Padukone
Published on

Deepika Padukone : ಬಾಲಿವುಡ್​ ಬ್ಯೂಟಿ ದೀಪಿಕಾ ಪಡುಕೋಣೆ ಅವರ ಹೆಸರು ಕಳೆದ ಎರಡು ಮೂರು ದಿನಗಳಿಂದ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಯಾಗುತ್ತಿದೆ. ಅದಕ್ಕೆ ಕಾರಣ ನಿರ್ದೇಶಕ ಸಂದೀಪ್ ರೆಡ್ಡಿ ವಂಗಾ. ಪ್ರಭಾಸ್ ನಾಯಕರಾಗಿ ನಟಿಸುತ್ತಿರುವ 'ಸ್ಪಿರಿಟ್' ಹೆಸರಿನ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಆರಂಭದಲ್ಲಿ ದೀಪಿಕಾ ಪಡುಕೋಣೆ ಈ ಚಿತ್ರದ ನಾಯಕಿ ಎಂದು ಹೇಳಲಾಗುತ್ತಿತ್ತು. ಆದರೆ, ಕೊನೆಯ ಕ್ಷಣದಲ್ಲಿ ತೃಪ್ತಿ ದಿಮ್ರಿ ಅವರನ್ನು ನಾಯಕಿಯಾಗಿ ತೆಗೆದುಕೊಳ್ಳಲಾಗಿದೆ. ಅಲ್ಲದೆ, ಸಂದೀಪ್ ಅವರು ತಮ್ಮ ಚಿತ್ರದ ಕಥೆ ಲೀಕ್​ ಆಗಿದೆ ಎಂದು ಗಂಭೀರ ಆರೋಪ ಮಾಡಿದ್ದು, ಪರೋಕ್ಷವಾಗಿ ದೀಪಿಕಾ ಅವರನ್ನು ಗುರಿಯಾಗಿಸಿದ್ದಾರೆ. ಇದರ ಬೆನ್ನಲ್ಲೇ ದೀಪಿಕಾ ಪಡುಕೋಣೆ ಆಡಿರುವ ಮಾತುಗಳು ಎಲ್ಲರ ಗಮನ ಸೆಳೆದಿವೆ.

ಹೃದಯದ ಮಾತನ್ನು ಕೇಳುತ್ತೇನೆ

ಇತ್ತೀಚೆಗೆ ಫ್ಯಾಷನ್ ಶೋವೊಂದರಲ್ಲಿ ಭಾಗವಹಿಸಿದ್ದ ದೀಪಿಕಾ ಪಡುಕೋಣೆ, ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಕೆಲವು ಆಸಕ್ತಿದಾಯಕ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಜೀವನದಲ್ಲಿ ಸಮತೋಲನವನ್ನು ಕಾಯ್ದುಕೊಳ್ಳಲು ಪ್ರಾಮಾಣಿಕತೆ ಮುಖ್ಯ. ನಾನು ಅದಕ್ಕೆ ಆದ್ಯತೆ ನೀಡುತ್ತೇನೆ. ಕಠಿಣ ಸಂದರ್ಭಗಳು ಎದುರಾದಾಗ, ನಾನು ನನ್ನ ಹೃದಯದ ಮಾತನ್ನು ಕೇಳುತ್ತೇನೆ. ಅದರ ನಂತರವೇ ನಾನು ನಿರ್ಧಾರಗಳನ್ನು ತೆಗೆದುಕೊಳ್ಳುತ್ತೇನೆ. ನಾನು ಯಾವುದೇ ಪರಿಸ್ಥಿತಿಯನ್ನು ಎದುರಿಸಬಲ್ಲೆ ಎಂದು ಹೇಳಿದರು.

ದೀಪಿಕಾ ಅವರು ಈ ಸಂದರ್ಶನದಲ್ಲಿ ಯಾರ ಹೆಸರನ್ನೂ ಉಲ್ಲೇಖಿಸದಿದ್ದರೂ ಕೆಲವು ನೆಟ್ಟಿಗರು ಮಾತ್ರ ದೀಪಿಕಾ ಪರೋಕ್ಷವಾಗಿ ಸಂದೀಪ್ ವಂಗಾಗೆ ತಿರುಗೇಟು ನೀಡಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.

ಸಂದೀಪ್​ ವಂಗಾ ಹೇಳಿದ್ದೇನು?

ಸಂದೀಪ್​ ರೆಡ್ಡಿ ವಂಗಾ ಅವರು ಇತ್ತೀಚೆಗೆ ಬಾಲಿವುಡ್ ಪಿಆರ್ ತಂಡವನ್ನು ಉದ್ದೇಶಿಸಿ ಒಂದು ಸಂಚಲನಾತ್ಮಕ ಟ್ವೀಟ್ ಮಾಡಿದ್ದರು. ಸ್ಟಾರ್​ ನಟಿಯ ಹೆಸರನ್ನು ಉಲ್ಲೇಖಿಸಿದೇ ಖಾರವಾಗಿ ಕೌಂಟರ್​ ಕೊಟ್ಟಿದ್ದರು. ಒಬ್ಬ ನಿರ್ದೇಶಕನಾಗಿ, ನಾನು ಕೆಲವು ದಿನಗಳ ಹಿಂದೆ ಓರ್ವ ಖ್ಯಾತ ನಾಯಕಿಗೆ ಕಥೆಯನ್ನು ಹೇಳಿದ್ದೆ. ನಾನು ಸಂಪೂರ್ಣ ನಂಬಿಕೆಯಿಂದ ಕಥೆಯನ್ನು ಹೇಳಿದೆ ಎಂಬುದನ್ನು ಗಮನಿಸಬೇಕು. ಆದರೆ, ಅವರು ನನ್ನ ನಂಬಿಕೆಯನ್ನು ಉಳಿಸಿಕೊಳ್ಳಲಿಲ್ಲ. ಕಥೆಯನ್ನು ಸೋರಿಕೆ ಮಾಡಿದ ವ್ಯಕ್ತಿ ತನ್ನ ವ್ಯಕ್ತಿತ್ವವನ್ನು ಕಳೆದುಕೊಂಡರು. ನಾವು ನಟರಿಗೆ ಕಥೆಯನ್ನು ಹೇಳಿದಾಗ, ಅವರು ಯಾರಿಗೂ ಹೇಳಬಾರದು ಎಂಬ ಅನೌಪಚಾರಿಕ ಒಪ್ಪಂದವಿರುತ್ತದೆ. ಆದರೆ, ನಟಿ ಅದನ್ನೂ ಉಲ್ಲಂಘಿಸಿದ್ದಾರೆ. ನಿಮ್ಮ ಸ್ತ್ರೀವಾದವು ಇದನ್ನೇ ಉಲ್ಲೇಖಿಸುತ್ತದೆಯೇ? ನಿಮ್ಮ ಪಿಆರ್ ತಂಡವು ಯುವ ನಟನನ್ನು ಕೀಳಾಗಿ ನೋಡುತ್ತದೆ. ಸ್ತ್ರೀವಾದ ಎಂದರೆ ಇದೇನಾ? ನಾನು ಸಿನಿಮಾ ನಿರ್ದೇಶಕನಾಗಿ ಕಥೆ ಬರೆಯಲು ಹಲವು ವರ್ಷಗಳಿಂದ ಶ್ರಮಿಸಿದ್ದೇನೆ. ನನಗೆ ಸಿನಿಮಾವೇ ಎಲ್ಲವೂ. ನನ್ನ ಚಿತ್ರದ ಸಂಪೂರ್ಣ ಕಥೆಯನ್ನು ನೀವು ಸೋರಿಕೆ ಮಾಡಿದರೂ, ನಾನು ಕಳೆದುಕೊಳ್ಳಲು ಏನೂ ಇಲ್ಲ ಎಂದು ಸಂದೀಪ್ #dirtyPRgames ಎಂಬ ಹ್ಯಾಶ್‌ಟ್ಯಾಗ್ ಮೂಲಕ ಕಿಡಿಕಾರಿದ್ದರು.

ಪರೋಕ್ಷವಾಗಿ ದೀಪಿಕಾ ಪಡುಕೋಣೆ ಬಗ್ಗೆ ಸಂದೀಪ್ ಟ್ವೀಟ್ ಮಾಡಿದ್ದರು. ಹೀಗಾಗಿ ನೆಟ್ಟಿಗರು ಕಾಮೆಂಟ್​ ಬಾಕ್ಸ್​ನಲ್ಲಿ ದೀಪಿಕಾ ಪಡುಕೋಣೆ ಅವರ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಇದೀಗ ದೀಪಿಕಾ ಪಡುಕೋಣೆ ಕೂಡ ಹೆಸರೇಳದೆ ಪರೋಕ್ಷವಾಗಿ ಸಂದೀಪ್​ ವಂಗಾ ರೆಡ್ಡಿಗೆ ತಿರುಗೇಟು ನೀಡಿದ್ದಾರೆ ಎಂದು ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.

ಇದೆಲ್ಲವನ್ನೂ ಬದಿಗಿಟ್ಟು ನೋಡಿದರೆ, ಸಂದೀಪ್ ವಂಗಾ 'ಸ್ಪಿರಿಟ್' ಚಿತ್ರದ ಕೆಲಸದಲ್ಲಿ ನಿರತರಾಗಿದ್ದಾರೆ. ಮತ್ತೊಂದೆಡೆ, ದೀಪಿಕಾ ಪಡುಕೋಣೆ 'ಕಲ್ಕಿ 2' ಚಿತ್ರಕ್ಕೆ ತಯಾರಿ ನಡೆಸುತ್ತಿದ್ದಾರೆ. ದೀಪಿಕಾ ಕೊನೆಯ ಬಾರಿಗೆ 'ಸಿಂಗಮ್ ಅಗೇನ್' ಚಿತ್ರದಲ್ಲಿ ಕಾಣಿಸಿಕೊಂಡರು. ಅದಾದ ನಂತರ, ಅವರು ಯಾವುದೇ ಹೊಸ ಯೋಜನೆಗಳಿಗೆ ಸಹಿ ಹಾಕಿಲ್ಲ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net