

ಬೆಳಗಾವಿ: ಕುಂದಾನಗರಿ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವ ಸಂಭ್ರಮ ಕಳೆಗಟ್ಟಿದೆ. ಚನ್ನಮ್ಮ ವೃತ್ತದಲ್ಲಿ ಕರವೇ ಸೇರಿದಂತೆ ವಿವಿಧ ಕನ್ನಡ ಪರ ಸಂಘಟನೆಗಳು ಮಧ್ಯರಾತ್ರಿಯೇ ರಾಜ್ಯೋತ್ಸವಕ್ಕೆ ಚಾಲನೆ ನೀಡಿದ್ದು, ಎಲ್ಲಿ ನೋಡಿದರೂ ಕನ್ನಡ ಬಾವುಟ ರಾರಾಜಿಸುತ್ತಿವೆ. ಅಕ್ಷರಶಃ ಕನ್ನಡದ ಹಬ್ಬದ ಸಡಗರ ಮೇಳೈಸಿದೆ.
ಚನ್ನಮ್ಮ ವೃತ್ತದಲ್ಲಿ ನಟ ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರ ಇಟ್ಟು ಕನ್ನಡಿಗರು ಪೂಜೆ ಸಲ್ಲಿಸಿ ಅಭಿಮಾನ ಮೆರೆದರು. ಚನ್ನಮ್ಮ ವೃತ್ತವನ್ನು ಹೂವಿನಿಂದ ಆಕರ್ಷಕವಾಗಿ ಅಲಂಕಾರ ಮಾಡಲಾಗಿದೆ. ತಡರಾತ್ರಿ ಕನ್ನಡ ಹಾಡುಗಳಿಗೆ ನೂರಾರು ಮಂದಿ ಚನ್ನಮ್ಮ ವೃತ್ತದಲ್ಲಿ ಡಾನ್ಸ್ ಮಾಡಿದರು.
ಅದ್ದೂರಿ ಕನ್ನಡ ರಾಜ್ಯೋತ್ಸವದ ಜತೆಗೆ ಅಪ್ಪು ಉತ್ಸವವೂ ನಡೆಯುತ್ತಿದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ ರಾಜ್ಯಗಳ ಸಂಪರ್ಕ ಕೊಂಡಿಯಾಗಿರುವ ಬೆಳಗಾವಿಯಲ್ಲಿ ಅರ್ಥಪೂರ್ಣವಾಗಿ ಕನ್ನಡ ರಾಜ್ಯೋತ್ಸವ ನಡೆಯುತ್ತಿದೆ. ಮಂಗಳವಾರ ಬೆಳಗ್ಗೆ 9ಕ್ಕೆ ಚನ್ನಮ್ಮ ವೃತ್ತದಲ್ಲಿ ಸಾವಿರಾರು ಮಂದಿ ಜಮಾವಣೆಗೊಂಡಿದ್ದು, ಕನ್ನಡ ಕಹಳೆ ಮೊಳಗಿಸುತ್ತಿದ್ದಾರೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ, ಹುಬ್ಬಳ್ಳಿ- ಧಾರವಾಡ ಸೇರಿದಂತೆ ವಿವಿಧ ಜಿಲ್ಲೆಯ ಜನರೂ ಪಾಲ್ಗೊಂಡಿದ್ದಾರೆ.
ಇತ್ತ ಕನ್ನಡ ರಾಜ್ಯೋತ್ಸವ ವಿರುದ್ಧ ಕರಾಳ ದಿನ ಆಚರಿಸಲು ಎಂಇಎಸ್ ಪುಂಡರ ಕರೆ ನೀಡಿದ್ದಾರೆ. ಇದನ್ನು ತಡೆಯಲು ನಗರದಲ್ಲಿ ಬೆಳಗಾವಿ ಪೊಲೀಸ್ ಕಮಿಷನರ್ ಡಾ. ಎಂ.ಬಿ. ಬೋರಲಿಂಗಯ್ಯ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮೂವರು ಡಿಸಿಪಿ, 12 ಎಸಿಪಿ, 52 ಇನ್ಸ್‌ಪೆಕ್ಟರ್, 2500 ಪೊಲೀಸ್ ಸಿಬ್ಬಂದಿ, 9 ಸಿಎಆರ್ ತುಕಡಿ, 10 ಕೆಎಸ್‌ಆರ್‌ಪಿ ತುಕಡಿ, 500 ಗೃಹರಕ್ಷಕ ದಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. 35 ವಿಡಿಯೋ ಕ್ಯಾಮರಾ, 300 ಸಿಸಿ ಕ್ಯಾಮರಾ, 8 ಡ್ರೋನ್ ಕ್ಯಾಮರಾ ಕಣ್ಗಾವಲಿದೆ.