ಬೆಳೆಯಲಿ ಸಿರಿಗನ್ನಡ: ಸರ್ಕಾರದ ಜತೆ ಜನರೂ ಕೈಜೋಡಿಸುವುದು ಅಗತ್ಯ

Editorial
Published on

ಮುಂಬೈ, ಮದ್ರಾಸ್, ಹೈದರಾಬಾದ್ ಪ್ರಾಂತ್ಯಗಳಲ್ಲಿ ಹಂಚಿಹೋಗಿದ್ದ ಕನ್ನಡ ಭಾಷಿಕರನ್ನು ಹಾಗೂ ಕನ್ನಡ ಭಾಷೆಯ ಪ್ರಾಬಲ್ಯವಿರುವ ಪ್ರಾಂತ್ಯಗಳನ್ನು ಒಂದುಗೂಡಿಸಿ 1956ರ ನವೆಂಬರ್ 1ರಂದು ಮೈಸೂರು ರಾಜ್ಯಕ್ಕೆ ಸೇರ್ಪಡೆ ಮಾಡಲಾಯಿತು. ತದನಂತರ ದೇವರಾಜ ಅರಸು ಮುಖ್ಯಮಂತ್ರಿಯಾದ ಸಂದರ್ಭದಲ್ಲಿ 1973ರ ನವೆಂಬರ್ 1ರಂದು ಕರ್ನಾಟಕ ಎಂಬ ಹೆಸರನ್ನು ರಾಜ್ಯವು ಪಡೆದುಕೊಂಡಿತು. ಕನ್ನಡ ಭಾಷಾವಾರು ಪ್ರಾಂತ್ಯ ರಚನೆಯಾದ ನಿಮಿತ್ತ ಪ್ರತಿವರ್ಷ ಕನ್ನಡ ರಾಜ್ಯೋತ್ಸವವನ್ನು ಸಂಭ್ರಮ- ಸಡಗರದಿಂದ ಆಚರಿಸುವುದರ ಮಧ್ಯೆಯೇ ಕರ್ನಾಟಕ ಏಕೀಕರಣದ ಉದ್ದೇಶ ಹಾಗೂ ಕನ್ನಡ ಭಾಷೆಯ ಉಳಿವಿನ ಕುರಿತಂತೆ ಪ್ರಶ್ನೆಗಳು ಕೇಳಿಬರುತ್ತಲೇ ಇವೆ. ಮಣ್ಣಿನ ಭಾಷೆಯಾದ ಕನ್ನಡವು ಅನ್ನದ ಭಾಷೆಯಾಗಿ ರೂಪುಗೊಳ್ಳುತ್ತಿಲ್ಲ.

ಜಾಗತಿಕ ಭಾಷೆಯಾಗಿ ರೂಪುಗೊಂಡಿರುವ ಇಂಗ್ಲಿಷ್​ನತ್ತ ಜನರ ಒಲವು ಹೆಚ್ಚಾಗುತ್ತಿರುವುದರಿಂದ ಕನ್ನಡ ಭಾಷೆಯ ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತಿದೆ. ಇಂಗ್ಲಿಷ್ ಕಲಿತರೆ ಉತ್ತಮ ಉದ್ಯೋಗಾವಕಾಶಗಳು ಲಭಿಸುತ್ತವೆ ಎಂಬ ಹಿನ್ನೆಲೆಯಲ್ಲಿ ಇಂಗ್ಲಿಷ್ ಮಾಧ್ಯಮದ ಶಾಲೆಗಳೇ ಪಸರಿಸುತ್ತಿವೆ. ಬಡಮಕ್ಕಳು ಮಾತ್ರ ಸರ್ಕಾರ ನಡೆಸುವ ಕನ್ನಡ ಶಾಲೆಗಳಿಗೆ ಸೇರುತ್ತಿದ್ದಾರೆ ಎಂಬ ಮಾತುಗಳು ಹಲವಾರು ವರ್ಷಗಳಿಂದ ಪ್ರತಿಧ್ವನಿಸುತ್ತಿರುವುದು ವಾಸ್ತವದ ಪ್ರತೀಕವಾದರೂ ರಾಜ್ಯ ಸರ್ಕಾರವು ಕನ್ನಡ ಭಾಷೆಯ ಪ್ರೋತ್ಸಾಹಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತ ಬರುತ್ತಿರುವುದನ್ನೂ ಅಲ್ಲಗಳೆಯಲಾಗದು. ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಒಂದನೇ ತರಗತಿಯಿಂದಲೇ ಕನ್ನಡ ಭಾಷೆ ಕಲಿಕೆಯನ್ನು ಕಡ್ಡಾಯಗೊಳಿಸಿದೆ. ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕೂಡ ಮಾತೃಭಾಷೆಯಲ್ಲಿಯೇ ಕಲಿಕೆಗೆ ಒತ್ತು ನೀಡಬೇಕೆಂದು ಹೇಳಿದೆ. ಉನ್ನತ ಶಿಕ್ಷಣದಲ್ಲಿಯೂ ಕನ್ನಡ ಭಾಷೆ ಕಲಿಕೆಯನ್ನು ಕಡ್ಡಾಯಗೊಳಿಸುವ ಪ್ರಯತ್ನವನ್ನು ಕೂಡ ಸರ್ಕಾರ ಮಾಡಿದೆ.

ಪ್ರಸ್ತುತವಾಗಿ ರಾಜ್ಯ ಸರ್ಕಾರವು ಜಾರಿಗೊಳಿಸಲು ಮುಂದಾಗಿರುವ ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ವಿಧೇಯಕವು ಕನ್ನಡ ಮತ್ತು ಕನ್ನಡ ಭಾಷಿಕರ ಪರವಾದ ನೀತಿ-ನಿಲುವುಗಳೊಂದಿಗೆ ರೂಪುಗೊಂಡಿದೆ. ಕನ್ನಡ ಮತ್ತು ಕನ್ನಡಿಗರಿಗೆ ಮೊದಲ ಆದ್ಯತೆ ಎಂಬ ಧೋರಣೆಯೊಂದಿಗೆ ಕನ್ನಡವನ್ನು ಅಧಿಕೃತ ಭಾಷೆಯಾಗಿ ಎಲ್ಲಾ ಹಂತಗಳಲ್ಲಿ ಅನುಷ್ಠಾನಗೊಳಿಸಲು ಶಾಸನಾತ್ಮಕ ಬಲ ತುಂಬುವ ನಿಟ್ಟಿನಲ್ಲಿ ಈ ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಿದ್ದು, ಮುಂದಿನ ಅಧಿವೇಶನದಲ್ಲಿ ಇದಕ್ಕೆ ಸಮ್ಮತಿ ದೊರೆಯುವ ನಿರೀಕ್ಷೆ ಇದೆ. ರಾಜ್ಯ ಸರ್ಕಾರದ ಇಲಾಖೆಗಳು, ಸ್ಥಳೀಯ ಸಂಸ್ಥೆಗಳು, ಮಂಡಳಿಗಳು, ನಿಗಮಗಳು, ಸರ್ಕಾರಿ ಉದ್ಯಮಗಳು, ನೋಂದಾಯಿತ ಸಹಕಾರಿ ಸಂಘಗಳು ಹೊರಡಿಸುವ ಎಲ್ಲ ಆದೇಶಗಳಲ್ಲಿ, ನಿಯಮಗಳಲ್ಲಿ ಅಧಿಕೃತ ಭಾಷೆಯಾಗಿ ಕನ್ನಡವನ್ನು ಬಳಸಬೇಕು. ಪತ್ರ ವ್ಯವಹಾರಕ್ಕಾಗಿ ಕನ್ನಡ ಬಳಸಬೇಕು. ಈ ಎಲ್ಲ ಕಡೆಗಳಲ್ಲಿ ಉದ್ಯೋಗ ಪಡೆದುಕೊಳ್ಳಬೇಕಾದರೆ ಕನ್ನಡ ಭಾಷಾ ಜ್ಞಾನ ಅವಶ್ಯಕ.. ಇಂತಹ ಹಲವಾರು ಮಹತ್ವದ ಅಂಶಗಳನ್ನು ಈ ವಿಧೇಯಕ ಒಳಗೊಂಡಿದೆ. ಶಾಸ್ತ್ರೀಯ ಭಾಷೆಯಾಗಿ ಘೋಷಣೆಯಾಗಿರುವ ಕನ್ನಡ ಭಾಷೆ ಉಳಿಸುವ ಮತ್ತು ಬೆಳೆಸುವ ಮಹತ್ತರ ಜವಾಬ್ದಾರಿ ಸರ್ಕಾರದ್ದು ಮಾತ್ರವಲ್ಲದೆ, ಭಾಷಿಕರದ್ದೂ ಆಗಿದೆ. ಮನೆಗಳಲ್ಲಿ ಕನ್ನಡ ಸಂಸ್ಕೃತಿಯನ್ನು ಕಾಪಿಟ್ಟುಕೊಳ್ಳುವತ್ತ ಹೆಚ್ಚಿನ ಮುತುವರ್ಜಿ ಅಗತ್ಯ. ಎಲ್ಲಕ್ಕಿಂತ ಮಿಗಿಲಾಗಿ ಎಲ್ಲರೂ ಕನ್ನಡಪ್ರೀತಿಯನ್ನು ಬೆಳೆಸಿಕೊಳ್ಳಬೇಕು. ಸರ್ಕಾರ ಹಾಗೂ ಕನ್ನಡಿಗರು ಕೈಜೋಡಿಸಿದರೆ ಕನ್ನಡ ಡಿಂಡಿಮ ಮೊಳಗಿಸಲು ಸಾಧ್ಯ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net