ಬೆಂಗಳೂರು:ಕನ್ನಡ ಸಿನಿಮಾ ರಂಗಕ್ಕೆ ಹೊಸಬರು, ಹೊಸ ಉತ್ಸಾಹದಿಂದ ಪ್ರವೇಶಿಸುತ್ತಲೇ ಇರುತ್ತಾರೆ. ಅಂತಹದೊಂದು ಹೊಸ ತಂಡದ ಚಿತ್ರ ‘ನಿಮ್ಮೆಲ್ಲರ ಆಶೀರ್ವಾದ’. ಇದೀಗ ಈ ಚಿತ್ರದ ಮೊದಲ ನೋಟ ಅನಾವರಣಗೊಂಡಿದೆ.

ಯುವ ನಿರ್ದೇಶಕ ರವಿಕಿರಣ್ ಚೊಚ್ಚಲ ಬಾರಿಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರವಿದು. ಅಷ್ಟೇ ಅಲ್ಲ, ಈ ಚಿತ್ರದ ಮೂಲಕ ಪ್ರತೀಕ್ ಶೆಟ್ಟಿ ನಾಯಕನಾಗಿ ಚಂದನವನಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಪ್ರತೀಕ್‌ಗೆ ಜೋಡಿಯಾಗಿ ‘ಭಿನ್ನ’ ಖ್ಯಾತಿಯ ಪಾಯಲ್ ರಾಧಾಕೃಷ್ಣ ಬಣ್ಣ ಹಚ್ಚಿದ್ದಾರೆ. ಪೊಲೀಸ್ ಅಧಿಕಾರಿಯೊಬ್ಬನ ವೃತ್ತಿ ಮತ್ತು ವೈಯಕ್ತಿಕ ಬದುಕಿನ ದಿನಚರಿಯ ಸುತ್ತ ಸುತ್ತುವ ಕಥಾಹಂದರವನ್ನು ಹೊಂದಿರುವ ಕೌಟುಂಬಿಕ ಸಿನಿಮಾ ‘ನಿಮ್ಮೆಲ್ಲರ ಆಶೀರ್ವಾದ’.
ಪ್ರತೀಕ್ ಹಾಗೂ ಪಾಯಲ್ ಜತೆ ಎಂ.ಎನ್. ಲಕ್ಷ್ಮೀದೇವಿ, ಅರವಿಂದ ಬೋಳಾರ್, ಗೋವಿಂದೇಗೌಡ, ಸ್ವಾತಿ ಗುರುದತ್, ದಿನೇಶ್ ಮಂಗಳೂರು ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ. ಉಳಿದಂತೆ ಈ ಚಿತ್ರಕ್ಕೆ ಸರವಣನ್ ಜಿ. ಎನ್. ಛಾಯಾಗ್ರಹಣ, ರಘು ನಿಡುವಳ್ಳಿ ಸಂಭಾಷಣೆ, ಸುನಾದ್ ಗೌತಮ್ ಸಂಗೀತ, ಸುರೇಶ್ ಆರುಮುಗಂ ಸಂಕಲನ ಇರಲಿದೆ. ‘ನಿಮ್ಮೆಲರ ಆಶೀರ್ವಾದ’ ಇದೇ ತಿಂಗಳು ಬಿಡುಗಡೆಯಾಗುವ ನಿರೀಕ್ಷೆಯಿದೆ.