ರವಿ ಬೆಳಗೆರೆ ನಿಧನಕ್ಕೆ ಕಂಬನಿ ಮಿಡಿದ ಸಿನಿಮಾ ಮಂದಿ

Ravi Belagere - Final
Published on

ಬೆಂಗಳೂರು: ಖ್ಯಾತ ಪತ್ರಕರ್ತ, ಕಾದಂಬರಿಕಾರ ರವಿ ಬೆಳಗೆರೆ ಅವರು ಶುಕ್ರವಾರ ಹೃದಯಾಘಾತದಿಂದ ನಿಧನರಾಗಿದ್ದಾರೆ. ಈಗಾಗಲೇ ಅಕ್ಷರ ಮಾಂತ್ರಿಕನ ನಿಧನಕ್ಕೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಸಿನಿಮಾ ಮಂದಿ ಸಹ ಅವರ ಸಾವಿಗೆ ಕಂಬನಿ ಮಿಡಿದಿದ್ದಾರೆ.

ಕಳೆದ ವರ್ಷ ಪ್ರಸಾರವಾದ 'ಬಿಗ್​ ಬಾಸ್​' ಸಂದರ್ಭದಲ್ಲಿನ ಒಂದು ಫೋಟೋ ಶೇರ್​ ಮಾಡಿರುವ ನಟ ಸುದೀಪ್​, 'ವೇದಿಕೆ ಮೇಲೆ ತೆಗೆದಂತಹ ಈ ಚಿತ್ರವು ಕೊನೆಯ ತನಕ ನನ್ನ ಜತೆಗಿರುತ್ತದೆ. ರವಿ ಬೆಳಗೆರೆ ಅವರನ್ನು ಬಹಳ ಮಿಸ್​ ಮಾಡಿಕೊಳ್ಳುತ್ತೇವೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಮತ್ತು ಅವರ ಅಗಲಿಕೆಯ ನೋವನ್ನು ಸಹಿಸಿಕೊಳ್ಳುವ ಶಕ್ತಿ ಅವರ ಕುಟುಂಬಕ್ಕೆ ಸಿಗಲಿ' ಎಂದು ಟ್ವೀಟ್​ ಮಾಡಿದ್ದಾರೆ.

ಇನ್ನು ಅವರ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿರುವ ಹಿರಿಯ ನಟ ಜಗ್ಗೇಶ್​, 'ಯಾರಿಗೂ ಅರ್ಥವಾಗದ ಮನುಷ್ಯ. ಒಮ್ಮೆ ಈತನ ಮಾತು ಸರಿ ಅನಿಸುತ್ತದೆ. ಕೆಲವೊಮ್ಮೆ ಬೇಕಿತ್ತಾ ಈ ಮಾತು ಅನಿಸುತ್ತದೆ. 30 ವರ್ಷದಿಂದ ಬಲ್ಲೆ. ಆದರೂ ನನಗೆ ಅರ್ಥವಾಗದ ಮನುಷ್ಯ. ಸಾಮಾನ್ಯ ಅಸಮಾನ್ಯ ಆದದ್ದು ಮಾತ್ರ ಅನುಸರಣೀಯ. ರವಿ ಅವರ ಖಾಸ್​ಬಾತ್​ ಬರವಣಿಗೆ ನನ್ನ ಅಚ್ಚುಮೆಚ್ಚು. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ' ಎಂದು ಬರೆದುಕೊಂಡಿದ್ದಾರೆ.

ನಿರ್ದೇಶಕ ಶಶಾಂಕ್​ ಸಹ ರವಿ ಬೆಳಗೆರೆ ಅವರನ್ನು ನೆನಪಿಸಿಕೊಂಡಿದ್ದು, 'ದೃಶ್ಯ ಮಾಧ್ಯಮದ ದಾಂಗುಡಿಯ ನಡುವೆ, ಒಂದು ತಲೆಮಾರನ್ನೇ ಓದುವ ಹವ್ಯಾಸಕ್ಕೆ ಒಗ್ಗಿಸಿದ ಅದ್ಭುತ ಲೇಖಕ ನೀವು. ನಿಮ್ಮ ಬರವಣಿಗೆ ಸದಾ ಅಮರ. ಹೋಗಿ ಬನ್ನಿ ಬೆಳಗೆರೆ ಸರ್...' ಎಂದು ಅವರು ವಿದಾಯ ಕೋರಿದ್ದಾರೆ.

'ಮುಂಜ್​ ಮುಂಜಾನೆ ರವಿ ಮುಳುಕಿದನು ಎಂಬ ಸುದ್ದಿ ಬೇಸರ ತರಿಸಿತು. ನಿರೂಪಣೆ, ವಾಚನ, ಬರಹ, ಮಾತು, ನಟನೆ ಎಲ್ಲದರಲ್ಲೂ ಬೆಳಗಿದ್ದ ರವಿ ಬೆಳಗೆರೆ ಅವರಿಗೆ ಅಂತಿಮ ನಮನಗಳು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಸಿಗಲಿ, ಆತ್ಮಕ್ಕೆ ಶಾಂತಿ ಲಭಿಸಲಿ' ಎಂದು ಟ್ವೀಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net